ಬೆಂಗಳೂರು: ನೀತಿ ಸಂಹಿತೆ ಮಾಧ್ಯಮಗಳಿಗೂ ಅನ್ವಯವಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.
ಕರ್ನಾಟಕ ಲೋಕಸಭೆ ಚುನಾವಣೆ 2019ರ ಚುನಾವಣೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಫೇಕ್ ನ್ಯೂಸ್ಗಳನ್ನು ಹರಡಲು ಅನುವು ಮಾಡಿಕೊಡಬಾರದು. ಮತದಾರರಿಗೆ ಮಾಹಿತಿ ತಲುಪಿಸುವ ಕೆಲಸ ಮಾಧ್ಯಮ ಮಾಡುತ್ತದೆ. ಚುನಾವಣೆಯಲ್ಲಿ ಮಾಧ್ಯಮದ ಪಾತ್ರ ತುಂಬಾ ಮುಖ್ಯವಾಗಿದೆ. ಇಲ್ಲವಾದರೆ ಮತದಾರರಿಗೆ ಮಾಹಿತಿ ತಲುಪಿಸಲು ಸಾಧ್ಯವಿಲ್ಲ ಎಂದರು.
ಮಾಧ್ಯಮಗಳು ಪ್ರಮುಖವಾಗಿ ಪೇಯ್ಡ್ ನ್ಯೂಸ್ ಬಗ್ಗೆ ಗಮನಹರಿಸಬೇಕು. ಅನಗತ್ಯ ಪೇಯ್ಡ್ ನ್ಯೂಸ್, ಫೇಕ್ ನ್ಯೂಸ್ ಬಗ್ಗೆ ತಿಳಿಯದಿದ್ದರೆ ತಪ್ಪು ಮಾಹಿತಿ ಹರಡುವ ಸಂಭವ ಇರುತ್ತದೆ. ಸದ್ಯ ಡಿಜಿಟಲ್ ಮೀಡಿಯಾದಲ್ಲಿ ಕೂಡಾ ಏನೆಲ್ಲಾ ಮಾಡಬೇಕು?, ಏನು ಮಾಡಬಾರದು ಎಂದು ತಿಳಿಯಬೇಕು. ಜಾಹೀರಾತಿನಲ್ಲೂ ಕೂಡಾ ಫೇಕ್ ನ್ಯೂಸ್, ಪೇಯ್ಡ್ ನ್ಯೂಸ್ ಬಗ್ಗೆ ಜಾಗೃತಿ ವಹಿಸಬೇಕು. ಈ ಹಿನ್ನೆಲೆ ಎಲ್ಲಾ ರೀತಿಯ ಮಾಹಿತಿ ನಿಮಗೂ ಇರಬೇಕು, ಜನಸಾಮಾನ್ಯರಿಗೂ ಇರಬೇಕು ಎಂದರು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇದೆ:
ಸಾಮಾಜಿಕ ಜಾಲತಾಣ ಸೆಲ್ ಮೂಲಕ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳನ್ನು ತಪಾಸಣೆ ಮಾಡುತ್ತಿರುತ್ತದೆ ಎಂದು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ಬಟವಾಡೆ ನಿರ್ದೇಶನಾಲಯದ ನಿರ್ದೇಶಕ ಸುನಿಲ್ ಪನ್ವಾರ್ ತಿಳಿಸಿದರು.
ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿ ರಾಜಕೀಯ ಸಂಬಂಧಿತ ವಿಚಾರಗಳನ್ನು ಪೋಸ್ಟ್ ಮಾಡಿದರೆ ಅದಕ್ಕೆ ಪೂರ್ವ ಅನುಮತಿ ಬೇಡ. ಆದರೆ, ಅಭ್ಯರ್ಥಿ ತನ್ನ ಬಗ್ಗೆ ಜಾಹೀರಾತು ನೀಡಬೇಕಾದರೆ ಮಾತ್ರ ಚುನಾವಣಾ ಆಯೋಗದ ಪೂರ್ವಾನುಮತಿ ಬೇಕು ಎಂದರು.
ಅಫಿಡವಿಟ್ನಲ್ಲಿ ಅಭ್ಯರ್ಥಿ ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಉಲ್ಲೇಖಿಸಬೇಕು. ಒಂದ ವೇಳೆ ಉಲ್ಲೇಖಿಸಿಲ್ಲವಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಾರಾದರು ಖಾಸಗಿ ವ್ಯಕ್ತಿ ಅಭ್ಯರ್ಥಿ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಬೇಕಾದರೆ ಅಭ್ಯರ್ಥಿಯ ಅನುಮತಿ ಪಡೆಯಬೇಕು. ಒಂದು ವೇಳೆ ಅಭ್ಯರ್ಥಿಯ ಅನುಮತಿ ಪಡೆಯದೇ ಜಾಹೀರಾತು ನೀಡಿದರೆ ಆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.