ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಮಾದಕ ದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 30 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ. ಮೇ 27 ರ ಮುಂಜಾನೆ ಇಥಿಯೋಪಿಯಾ ಏರ್ಲೈನ್ಸ್ ವಿಮಾನದಲ್ಲಿ 38 ವರ್ಷದ ಮಹಿಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ಈ ಸಂದರ್ಭದಲ್ಲಿ ಆಫ್ರಿಕಾದಿಂದ ಮಾದಕ ದ್ರವ್ಯ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳಿಗೆ ಮಾಹಿತಿ ಬಂದ ಹಿನ್ನೆಲೆ, ವಿಮಾನ ನಿಲ್ದಾಣದಲ್ಲಿ ನಡೆಸುತ್ತಿದ್ದರು. ಇದೇ ವೇಳೆ ಇಥಿಯೋಪಿಯಾದಿಂದ ಬಂದ ಮಹಿಳೆಯ ಮೇಲೆ ಸಂಶಯ ಮೂಡಿದೆ. ಬಳಿಕ ಆಕೆಯನ್ನು ವಶಕ್ಕೆ ಪಡೆದು ಲಗೇಜ್ಗಳನ್ನು ತಪಾಸಣೆ ನಡೆಸಿದ್ದಾಗ ಸೂಟ್ಕೇಸ್ ನಲ್ಲಿ ಮರೆಮಾಚಿ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಮೇಲ್ಛಾವಣಿ ಮಳೆಯಿಂದ ಸೋರಿಕೆ
ಆಫ್ರಿಕಾ ಖಂಡದ ಅಡಿಸ್ ಅಬಾಬಾ ಇಥಿಯೋಪಿಯಾ ದೇಶದಿಂದ ಬೆಂಗಳೂರಿಗೆ ಬಂದಿದ್ದ ಆಕೆ ಲೈಬೀರಿಯನ್ ದೇಶದವಳು ಎಂದು ಗುರುತಿಸಲಾಗಿದೆ. ಈಕೆ ಪ್ರವಾಸಿ ವೀಸಾದ ಮೇಲೆ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದು, ಸೂಟ್ಕೇಸ್ ನ ತಳಭಾಗದಲ್ಲಿ ಕೊಕೇನ್ ಕಳ್ಳಸಾಗಣೆ ಮಾಡಲು ವಿಶೇಷ ವಿನ್ಯಾಸ ಮಾಡಲಾಗಿತ್ತು. 2 ಕೆಜಿ ತೂಕದ 30 ಕೋಟಿ ಮೌಲ್ಯದ ಕೊಕೇನ್ ನನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಿಳೆಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಬಂಧಿಸಲಾಗಿದ್ದು. ಆರೋಪಿ ಮಹಿಳೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚಿನ್ನ ಕಳ್ಳ ಸಾಗಣಿಕೆಗಾಗಿಯೇ ವಿಶೇಷ ಒಳ ಉಡುಪು ಧರಿಸಿ ಸಿಕ್ಕಿಬಿದ್ದ ಚಾಲಾಕಿಗಳು : ಕಳೆದ ತಿಂಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸೀಜ್ ಮಾಡಿದ್ದರು. ಮಲೇಶಿಯಾದಿಂದ ಪ್ರಯಾಣಿಕರು ಏರ್ಪೋರ್ಟ್ಗೆ ಬಂದಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದು ತೀವ್ರ ತಪಾಸಣೆಗೆ ಒಳಪಡಿಸಿದ್ದರು.
ಈ ವೇಳೆ ಚಿನ್ನ ಕಳ್ಳ ಸಾಗಣಿಕೆಗಾಗಿಯೇ ವಿಶೇಷ ಒಳ ಉಡುಪು ಮಾಡಿಸಿದ್ದು ಕಂಡು ಬಂದಿತ್ತು. ಇನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಗೊತ್ತಾಗದಂತೆ ಒಳ ಉಡುಪಿನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಸಾಗಣೆಗೆ ಯತ್ನ ನಡೆಸಿದ್ದರು ಎಂದು ಗೊತ್ತಾಗಿತ್ತು. ಈ ಸಂದರ್ಭದಲ್ಲಿ ಪೇಸ್ಟ್ ರೂಪದಲ್ಲಿ ತಂದಿದ್ದ 2.2 ಕೆಜಿಯ 1 ಕೋಟಿ 33 ಲಕ್ಷ ಮೌಲ್ಯದ ಚಿನ್ನ ವಶವನ್ನು ಪಡೆದಿದ್ದರು. ಹಾಗು ದುಬೈನಿಂದ ಇಕೆ 568 ವಿಮಾನದಲ್ಲಿ ಬಂದಿದ್ದ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ : ಏರ್ಲೈನ್ಸ್ ಮಹಿಳಾ ಸಿಬ್ಬಂದಿಗೆ ಎಲ್ಲೆಲ್ಲೋ ಟಚ್ ಮಾಡಿ ಅಸಭ್ಯ ವರ್ತನೆ.. ಪ್ರಯಾಣಿಕನ ವಿರುದ್ಧ ದೂರು