ಬೆಂಗಳೂರು: ಮಹಾರಾಷ್ಟ್ರ, ಬಿಹಾರ, ಒಡಿಶಾ ಹಾಗು ಈಶಾನ್ಯ ರಾಜ್ಯಗಳಲ್ಲಿ ಸಫಲವಾದ ಮೈತ್ರಿ ಸರ್ಕಾರ ಕಸರತ್ತು ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮಾತ್ರ ಅಷ್ಟಾಗಿ ಫಲಿಸಲಿಲ್ಲ. ಮೂರು ಬಾರಿ ನಡೆದ ಸಮ್ಮಿಶ್ರ ಸರ್ಕಾರದ ಪ್ರಯೋಗ ದೀರ್ಘಾವಧಿ ಕಾಣುವಲ್ಲಿ ವೈಫಲ್ಯ ಕಂಡಿದೆ. ಬಾಹ್ಯ ಬೆಂಬಲ ಪಡೆದ ಸರ್ಕಾರವೂ ಪೂರ್ಣಾವಧಿ ಮುಗಿಸಿಲ್ಲ ಎನ್ನುವುದು ರಾಜ್ಯದಲ್ಲಿ ಏಕ ಪಕ್ಷದ ಸರ್ಕಾರಕ್ಕೆ ಮಾತ್ರ ಭವಿಷ್ಯ ಎನ್ನುವ ಸ್ಪಷ್ಟತೆ ನೀಡಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮೊದಲ ಬಾರಿಗೆ ರಚನೆಯಾಗಿದ್ದು 2004ರಲ್ಲಿ. ಆದರೆ ಅದಕ್ಕೂ ಮೊದಲೇ ಒಮ್ಮೆ ಕೆಲವು ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆಯಾದ ಉದಾಹರಣೆಯೂ ಇದೆ. 1983 ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
ಜನತಾ ಪಕ್ಷ 95 ಸ್ಥಾನ, ಕಾಂಗ್ರೆಸ್ 82 ಸ್ಥಾನ ಮತ್ತು ಬಿಜೆಪಿ 18 ಸ್ಥಾನ ಗಳಿಸಿತ್ತು. ಅಂದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಜನತಾ ಪಕ್ಷ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ 1983 ರ ಜನವರಿ 10 ರಿಂದ 1985 ರ ಮಾರ್ಚ್ 7ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಆಡಳಿತ ನಡೆಸಿದರು.
ಆದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಹಿನ್ನೆಲೆಯಲ್ಲಿ ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಜನಾದೇಶ ಪಡೆಯಲು ಜನತೆಯ ಮುಂದೆ ಹೋದರು. ಹಾಗಾಗಿ ಕೇವಲ ಎರಡು ವರ್ಷಕ್ಕೆ ಬಾಹ್ಯ ಬೆಂಬಲದೊಂದಿಗೆ ರಚನೆಯಾದ ಸರ್ಕಾರ ಪತನವಾಯಿತು.
ಇದಾದ ಎರಡು ದಶಕದ ನಂತರ ರಾಜ್ಯದಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ರಾಜ್ಯದಲ್ಲಿ ಮೊದಲ ಮೈತ್ರಿ ಸರ್ಕಾರ ರಚನೆಗೆ ಸಾಕ್ಷಿಯಾಯಿತು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನ, ಕಾಂಗ್ರೆಸ್ 65 ಸ್ಥಾನ ಮತ್ತು ಜೆಡಿಎಸ್ 58 ಸ್ಥಾನ ಗಳಿಸಿತು. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು.
ಮೈತ್ರಿ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಧರಂ ಸಿಂಗ್ 2004ರ ಮೇ 28 ರಿಂದ 2006 ರ ಫೆಬ್ರವರಿ 3 ರ ವರೆಗೆ ಆಡಳಿತ ನಡೆಸಿದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಬಹುತೇಕ ಶಾಸಕರು ವಾಪಸ್ ಪಡೆದಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಗಿ 20 ತಿಂಗಳಿಗೇ ಮೊದಲ ಮೈತ್ರಿ ಸರ್ಕಾರ ಕೊನೆಯಾಯಿತು.
ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಿಂದ ಹೊರಬಂದ ಜೆಡಿಎಸ್ ಶಾಸಕರು ಬಿಜೆಪಿ ಜೊತೆ ಕೈ ಜೋಡಿಸಿ ಹೊಸ ಮೈತ್ರಿ ಸರ್ಕಾರ ರಚಿಸಿದರು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿ ಎರಡನೇ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತು. ಫೆಬ್ರವರಿ 3 ರಿಂದ 2007 ರ ಅಕ್ಟೋಬರ್ 8ರ ವರೆಗೆ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಡಳಿತ ನಡೆಸಿದರು.
20-20 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದದಂತೆ ಕುಮಾರಸ್ವಾಮಿ 20 ತಿಂಗಳು ಆಳ್ವಿಕೆ ಮುಗಿಸಿ ರಾಜೀನಾಮೆ ನೀಡಿದರು. 2007ರ ನವೆಂಬರ್ 12 ರಂದು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆದರೆ ಮೈತ್ರಿ ಸರ್ಕಾರದಲ್ಲಿ ಬಿರುಕುಂಟಾಗಿ ಜೆಡಿಎಸ್ ಬೆಂಬಲ ವಾಪಸ್ ಪಡೆದಿದ್ದರಿಂದ ನವೆಂಬರ್ 19ರಂದು ಯಡಿಯೂರಪ್ಪ ರಾಜೀನಾಮೆ ನೀಡಿದರು.
ಇದಾಗಿ ದಶಕದ ನಂತರ ರಾಜ್ಯದಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಮತ್ತೊಂದು ಮೈತ್ರಿ ಸರ್ಕಾರ ರಚನೆಗೆ ಕಾರಣವಾಯಿತು. 2004ರಂತೆ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ನಿರ್ಣಯ ಮಾಡಲಾಯಿತು.
ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡುವ ನಿರ್ಧಾರದ ಮೇಲೆ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿ 2018 ರ ಮೇ 23 ರಿಂದ 2019 ರ ಜುಲೈ 26ರವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕಾಂಗ್ರೆಸ್,ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿತು ಹೆಚ್ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಹಿಸ್ಟರಿ ರಿಪೀಟ್: 2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನವರು ಮುಖ್ಯಮಂತ್ರಿಯಾಗಿದ್ದು ಜೆಡಿಎಸ್ ಶಾಸಕರು ಬೆಂಬಲ ವಾಪಸ್ ಪಡೆದ ಕಾರಣದಿಂದಾಗಿ ಕಾಂಗ್ರೆಸ್‌ನ ಧರಂ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. 2018 ರಚನೆಯಾದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ನ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದು ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅದರಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆಯೇ ಹೆಚ್ಚಾಗಿದ್ದು ಸರ್ಕಾರ ಪತನಕ್ಕೆ ಅವರ ರಾಜೀನಾಮೆ ಪ್ರಮುಖ ಕಾರಣವಾಯಿತು. ಇದು ಒಂದು ರೀತಿ ಕಾಂಗ್ರೆಸ್ ಸಿಎಂ ರಾಜೀನಾಮೆಗೆ ಜೆಡಿಎಸ್ ಶಾಸಕರು ಕಾರಣವಾದಂತೆ ಜೆಡಿಎಸ್ ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಶಾಸಕರು ಕಾರಣ ಎನ್ನಬಹುದಾಗಿದೆ.
2004-2007 ರ ವರೆಗೆ ಎರಡು ಬಾರಿ 2018-2019ರ ವರೆಗೆ ಒಮ್ಮೆ ಒಟ್ಟು ಮೂರು ಬಾರಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದರೂ ಹೆಚ್ಚು ಕಾಲ ಆಡಳಿತ ನಡೆಸಲು ಸಾಧ್ಯವಾಗಿಲ್ಲ. ಮೂರು ಬಾರಿಯೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಪ್ರಸಂಗವೇ ನಡೆದಿದೆ. ಹಾಗಾಗಿ ಈ ಬಾರಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗುತ್ತಾ ಅಥವಾ ಮತ್ತೆ ಮೈತ್ರಿ ಪ್ರಯೋಗ ನಡೆಯುತ್ತಾ ಎನ್ನುವ ಕುತೂಹಲ ಮನೆ ಮಾಡಿದೆ.
ಆಡಳಿತಾರೂಢ ಬಿಜೆಪಿ ಸರ್ಕಾರ ಪೂರ್ಣ ಬಹುಮತದ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದರೆ ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿ ನಾವೇ ಅಧಿಕಾರಕ್ಕೆ ಬರುವ ಭರವಸೆಯಲ್ಲಿದೆ. ಇದರ ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್ 123 ಸ್ಥಾನದ ಗುರಿ ಹಾಕಿಕೊಂಡಿದೆ. ಮೂರು ಪಕ್ಷಗಳೂ ಸ್ವತಂತ್ರ ಅಧಿಕಾರದ ಹೇಳಿಕೆ ನೀಡುತ್ತಿದ್ದರೆ ಹೊಸದಾಗಿ ಪಕ್ಷ ಕಟ್ಟಿರುವ ಗಾಲಿ ಜನಾರ್ದನ ರೆಡ್ಡಿ ನಮ್ಮನ್ನು ಬಿಟ್ಟು ಈ ಬಾರಿ ಸರ್ಕಾರ ರಚನೆ ಸಾಧ್ಯವಿಲ್ಲ. ಸರ್ಕಾರ ರಚನೆಯಲ್ಲಿ ನಾವು ನಿರ್ಣಾಯಕ ಪಾತ್ರ ವಹಿಸಲಿದ್ದೇವೆ ಎಂದು ಹೇಳುತ್ತಿದ್ದಾರೆ.
ಇದನ್ನೆಲ್ಲಾ ನೋಡಿದರೆ ಈ ಬಾರಿ ಯಾರಿಗೆ ಬಹುಮತ ಬರಲಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಯಾವ ಮೈತ್ರಿ ಅಸ್ತಿತ್ವಕ್ಕೆ ಬರಲಿದೆ. ಬಂದರೂ ಎಷ್ಟು ದಿನ ಇದರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂಓದಿ: ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ: ಎದುರಿಸಿದ ಸವಾಲು ಸಂಕಷ್ಟ ನೂರೆಂಟು!