ಬೆಂಗಳೂರು: ಕರ್ನಾಟಕವು ತೋಟಗಾರಿಕಾ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ “ಭಾರತದ ತೋಟಗಾರಿಕಾ ರಾಜ್ಯ” ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ತೋಟಗಾರಿಕಾ ವಿಸ್ತರಣೆ ಕಾರ್ಯಕ್ರಮದ ಅಡಿಯಲ್ಲಿ ತೋಟಗಾರಿಕಾ ಕ್ಷೇತ್ರವನ್ನು 32,000 ಹೆಕ್ಟೇರ್ ಗಳಷ್ಟು ವಿಸ್ತರಿಸಲಾಗಿದೆ.
2012ನೇ ಸಾಲಿನಲ್ಲಿ ಸ್ಥಾಪಿಸಲಾದ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಜ್ಞಾನಗಳನ್ನು ಒಳಗೊಂಡಿರುವ ಒಂದು ವಿಶಿಷ್ಟವಾದ ಸಮಗ್ರ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ ಮತ್ತು ಕೊಡಗಿನ ಕೃಷಿಕರ ಅವಶ್ಯಕತೆಗಳನ್ನು ಪೂರೈಸುತ್ತಿದೆ.
ರಾಜ್ಯ ಸರ್ಕಾರವು ಸಾಗರ ತಾಲ್ಲೂಕಿನ ಇರುವಕ್ಕಿ ಗ್ರಾಮದಲ್ಲಿ 787 ಎಕರೆ ಕಂದಾಯ ಭೂಮಿಯನ್ನು ಹಂಚಿಕೆ ಮಾಡಿದೆ. ಈ ವಿಶ್ವವಿದ್ಯಾಲಯದ ಕಾಮಗಾರಿಗಳಿಗಾಗಿ 155 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇರುವಕ್ಕಿಯಲ್ಲಿ ತರಗತಿಗಳನ್ನು ಪ್ರಾರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು.
2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 20 ಲಕ್ಷ ಹೆಕ್ಟೇರುಗಳಲ್ಲಿ 185 ಲಕ್ಷ ಟನ್‍ಗಳಷ್ಟು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿದೆ. ತೋಟಗಾರಿಕೆ ಬೆಳೆಗಳ ಅಸಮರ್ಪಕ ಕೊಯ್ಲೋತ್ತರ ನಿರ್ವಹಣೆ ಹಾಗೂ ಶೀತಲ ಗೃಹಗಳ ಕೊರತೆಯಿಂದ ಆಗುತ್ತಿರುವ ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸಲು ಬೇಡಿಕೆಯಿರುವ ಜಿಲ್ಲೆಗಳ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 5000 ಮೆಟ್ರಿಕ್ ಟನ್ ಸಾಮರ್ಥ್ಯದ 10 ಶೀತಲ ಗೃಹಗಳನ್ನು 75 ಕೋಟಿ ರೂ.ಗಳ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು.
ಕರ್ನಾಟಕದಲ್ಲಿ ಶೇ.75 ರಷ್ಟು ಸಣ್ಣ ಹಾಗೂ ಅತೀ ಸಣ್ಣ ರೈತರಿದ್ದಾರೆ. ರಾಜ್ಯದ ಕೃಷಿ ಪದ್ಧತಿಯು ಬಹುತೇಕ ಮಳೆಯಾಧಾರಿತ ಆಗಿರುವುದರಿಂದ ತೋಟಗಾರಿಕಾ ಬೆಳೆಗಳ ಪ್ರದೇಶವನ್ನು ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರು ಇಚ್ಛಿಸಿದಲ್ಲಿ ಅವರಿಗೆ ಬೀಜ, ರಸಗೊಬ್ಬರ ಖರೀದಿ, ಕೃಷಿ ಕಾರ್ಮಿಕರ ವೆಚ್ಚ ಭರಿಸಲು ಅನುಕೂಲವಾಗುವಂತೆ ಒಂದು ಸಮಗ್ರ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಂಡಲ್ಲಿ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ.ಗಳ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.‘
ಹಾಪ್‍ಕಾಮ್ಸ್ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಘವಾಗಿದ್ದು, ರಾಜ್ಯದ ತೋಟಗಾರಿಕಾ ಬೆಳೆಗಾರರ ಬೆನ್ನೆಲುಬಾಗಿದೆ. ಹಾಪ್ಕಾಮ್ಸ್ಗಳಲ್ಲಿ ಉತ್ತಮ ಸೇವೆಗಳನ್ನು ಒದಗಿಸುವ ಹಾಗೂ ವಿಸ್ತರಿಸುವ ಉದ್ದೇಶದಿಂದ ಹಾಪ್‍ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲಾಗುವುದು.
ರಾಜ್ಯ ಸರ್ಕಾರವು ಕೊಳೆತು ಹೋಗಬಹುದಾದ ಹೂವು, ಟೊಮಾಟೋ, ಆಲೂಗಡ್ಡೆ, ಈರುಳ್ಳಿ, ಹೂಕೋಸು, ದಾಳಿಂಬೆ ಇತ್ಯಾದಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯದ ಬಳಕೆ ಮಾಡಲಾಗುತ್ತದೆ ಎಂದು ಬಜೆಟ್ನಲ್ಲಿ ತಿಳಿಸಿದ್ದಾರೆ.