ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಿಂದ ನೂತನವಾಗಿ ಸಚಿವರಾದ ಏಳು ಮಂದಿಗೆಗೆ ಇಂದು ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಸಂಕ್ರಾಂತಿಗೂ ಮುನ್ನ ದಿನವಾದ ಜ.13 ರಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾತೆಗಳ ಹಂಚಿಕೆಗೆ ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಅನಗತ್ಯವಾಗಿ ಖಾತೆಗಳ ಹಂಚಿಕೆ ವಿವಾದ ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಖಾತೆಗಳ ಹಂಚಿಕೆ ಮಾಡದೇ ಕೇವಲ ವಿಧಾನಸೌಧದಲ್ಲಿ ಕೊಠಡಿಗಳ ಹಂಚಿಕೆ ಮಾಡಿದ್ದರು. ಇದೀಗ ಅಮಿತ್ ಶಾ ರಾಜ್ಯ ಪ್ರವಾಸ ಮುಗಿಸಿ ನಿರ್ಗಮಿಸಿದ್ದು, ಇಂದು ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಇರುವ ಖಾತೆಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ, ಇಂಧನ, ಸಿಟಿ ರವಿ ರಾಜೀನಾಮೆಯಿಂದ ತೆರವಾಗಿರುವ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಕ್ರೀಡೆ ಮತ್ತು ಯುವಜನ ಸೇವೆ, ನಾಗೇಶ್ ರಾಜೀನಾಮೆಯಿಂದ ತೆರವಾಗಿರುವ ಅಬಕಾರಿ ಖಾತೆ ಜೊತೆಗೆ ಕೌಶಲ್ಯ ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಓದಿ: ರಾಜ್ಯದಲ್ಲಿಂದು 745 ಮಂದಿಗೆ ಕೋವಿಡ್: ನಾಲ್ವರು ಸೋಂಕಿತರು ಬಲಿ
ನೂತನ ಸಚಿವರು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದು, ಕೆಲವರ ಬಳಿ ಇರುವ ಖಾತೆಗಳಿಗೂ ಬೇಡಿಕೆ ಇಟ್ಟಿದ್ದಾರೆ. ಕೈಗಾರಿಕೆ ಖಾತೆಗೆ ನಿರಾಣಿ ಬೇಡಿಕೆ ಇರಿಸಿದ್ದು, ಇಂಧನ ಖಾತೆಗೆ ಉಮೇಶ್ ಕತ್ತಿ, ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಅರವಿಂದ ಲಿಂಬಾವಳಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಖಾತೆಗಳಿಗೆ ಖ್ಯಾತೆ ತೆಗೆಯಲಾಗುತ್ತದೆ ಎನ್ನುವ ಕಾರಣಕ್ಕೆ ಅಮಿತ್ ಶಾ ರಾಜ್ಯ ಪ್ರವಾಸ ಮುಗಿಯುವವರೆಗೂ ಸುಮ್ಮನಿದ್ದ ಸಿಎಂ ಇದೀಗ ಖಾತೆ ಹಂಚಿಕೆಗೆ ಮುಂದಾಗಿದ್ದು, ಕೆಲವರ ಖಾತೆ ಬದಲಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.