ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.
ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರ ನಿಧನ ತೀವ್ರ ನೋವುಂಟು ಮಾಡಿದೆ. ಪಕ್ಷಕ್ಕೆ ಅವರು ನೀಡಿದ ಕೊಡುಗೆ ಮತ್ತು ಹಣಕಾಸು, ರಕ್ಷಣಾ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳನ್ನು ಒಳಗೊಂಡಂತೆ ನಿರ್ಣಾಯಕ ಸಚಿವಾಲಯಗಳನ್ನು ನಿರ್ವಹಿಸಿದ ಪರಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರ ಕುಟುಂಬಕ್ಕೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವುಂಟಾಯಿತು.
ಜಸ್ವಂತ್ ಸಿಂಗ್ ಅವರು ಈ ದೇಶ ಕಂಡ ಒಬ್ಬ ಪ್ರಾಮಾಣಿಕ ವ್ಯಕ್ತಿ .ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದರು.
ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಜಸ್ವಂತ್ ಸಿಂಗ್ ದೈವಾಧೀನರಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.