ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ತಕ್ಷಣ ಬಿಡುಗಡೆ ಮಾಡಲು ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಮತ ಕ್ಷೇತ್ರದ ಸದಸ್ಯರ ಬೇಡಿಕೆಯನ್ನು ಉದ್ದೇಶಿಸಿ ಮಾತನಾಡಿ, ಅತಿಥಿ ಶಿಕ್ಷಕರ ಸಮಸ್ಯೆಯ ಅರಿವು ನನಗಿದೆ. ಇವರಿಗೆ ವೇತನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ಇತ್ತರು.
ಇಂದು ವಿಧಾನ ಪರಿಷತ್‌ನ ಬೆಳಗಿನ ಅವಧಿಯನ್ನು ಇದೇ ವಿಚಾರ ತಿಂದು ಹಾಕಿತ್ತು. ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪರಿಷತ್ ಸದಸ್ಯರ ಸಭೆ ಕೂಡ ನಡೆದಿತ್ತು. ಈ ವೇಳೆ ಸಿಎಂ ಭರವಸೆ ನೀಡಿ, ನಂತರ ಸದನದಲ್ಲಿ ಸಿಎಂ ಹಾಜರಾಗಿ ಭರವಸೆ ನೀಡಿದರು.
ಅತಿಥಿ ಉಪನ್ಯಾಸಕರ ವೇತನ ವಿಚಾರ: ಸದನದ ಬಾವಿಗಿಳಿದು ಆಡಳಿತ ಪಕ್ಷದ ಸದಸ್ಯನಿಂದಲೇ ಧರಣಿ
ವಿವಿಧ ವಿಧೇಯಕ ಮಂಡನೆ : ವಿಧಾನ ಪರಿಷತ್ ನಲ್ಲಿ ವಿವಿಧ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಎಪಿಎಂಸಿ ತಿದ್ದುಪಡಿ ವಿಧೇಯಕ, ರೇಸ್ ಕೋರ್ಸ್, ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ವಿಧೇಯಕ, ಕೈಗಾರಿಕಾ ತಿದ್ದುಪಡಿ ವಿಧೇಯಕ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ವಿಧೇಯಕ ಸೇರಿ ವಿವಿಧ ವಿಧೇಯಕಗಳನ್ನು ಪರಿಷತ್‌ನಲ್ಲಿ ಮಂಡಿಸಲಾಯಿತು.
ಗಣಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಿದ್ದುಪಡಿ ವಿಧೇಯಕವನ್ನು ಇಂದು ಕಲಾಪದಲ್ಲಿ ಹಿಂಪಡೆಯಲಾಯಿತು. ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಸ್ತಾಪ ಮಾಡಿ ಚರ್ಚೆಗೆ ಕೋರಿದಾಗ ಸಭಾಪತಿಗಳು ನಿಯಮ 59ರ ಬದಲು 68ರ ಅಡಿ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ಇತ್ತರು.