ಬೆಂಗಳೂರು : ನಾಡೋಜ ಡಾ. ಸಿದ್ದಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ ಜ್ಞಾನಭಾರತಿಯ ಕಲಾ ಗ್ರಾಮದಲ್ಲಿ ನಡೆಸಲಾಯ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿ, ಸಿದ್ದಲಿಂಗಯ್ಯ ಪ್ರತಿಷ್ಠಾನಕ್ಕೆ ಸಸಿ ನೆಟ್ಟು ಚಾಲನೆ ನೀಡಿದರು. ಕವಿ ಸಿದ್ದಲಿಂಗಯ್ಯ ನುಡಿ ನಮನ ಕಾರ್ಯಕ್ರಮದಲ್ಲಿ ಡಿಸಿಎಂ ಕಾರಜೋಳ, ಸಚಿವ ಸೋಮಣ್ಣ, ಶಾಸಕ ಮುನಿರತ್ನ, ಸಿದ್ದಲಿಂಗಯ್ಯ ಕುಟುಂಬ ಸದಸ್ಯರು, ಸಿದ್ದಲಿಂಗಯ್ಯ ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಿ ವೃಕ್ಷದ ಕೆಳಗೆ ಹಾಗೂ ಕೆಂಪು ಸೂರ್ಯ ಎಂಬ ಎರಡು ಕೃತಿಗಳ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಸಿದ್ದಲಿಂಗಯ್ಯ ಅವರು ಸಹ ಒಬ್ಬರು. ಅವರು ಬಸವಣ್ಣ ಅವರ ವಿಚಾರದಾರೆಯನ್ನ ಮೈಗೂಡಿಸಿಕೊಂಡಿದ್ದರು. ಅವರೊಂದಿಗೆ ನನ್ನ ಸಂಬಂಧ ತುಂಬಾ ಆತ್ಮೀಯತೆಯಿಂದ ಕೂಡಿತ್ತು. ಹಲವು ಬಾರಿ ನನಗೆ ಮಾರ್ಗದರ್ಶನ ನೀಡಿದ್ದರು. ಅವರನ್ನ ಕಳೆದುಕೊಂಡು ಕುಟುಂಬ ಸದಸ್ಯರೊಬ್ಬರನ್ನ ಕಳೆದುಕೊಂಡಂತೆ ಆಗಿದೆ ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಪರಿಷತ್‌ನಲ್ಲಿ ಮಾಡಿದ ಭಾಷಣ ಮರೆಯಲಾಗದು. ಬೋಧಿ ವೃಕ್ಷ ಅವರ ಕೊನೆ ಕವನ ಸಂಕಲನ. ಅದು ನನಗೆ ಅರ್ಪಿಸಿದ್ದಾರೆ ಎಂದು ಮನದುಂಬಿ ಬಂದಿದೆ ಎಂದ ಅವರು, ಸ್ಮಾರಕ ನಿರ್ಮಾಣ ವಿಚಾರವಾಗಿ ಮಾತನಾಡಿ, ಸಚಿವರು ಅಧಿಕಾರಗಳ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಸಿದ್ದಲಿಂಗಯ್ಯ ಅವರು 2ನೇ ಅಂಬೇಡ್ಕರ್ ಇದ್ದ ಹಾಗೆ : ಸಚಿವ ಶ್ರೀರಾಮುಲು
ಸಿದ್ದಲಿಂಗಯ್ಯ ಅವರು 2ನೇ ಅಂಬೇಡ್ಕರ್ ಇದ್ದ ಹಾಗೆ, ದಲಿತ ಕುಟುಂಬದಲ್ಲಿ ಹುಟ್ಟಿ ಇಷ್ಟು ಪ್ರಶಸ್ತಿಗಳನ್ನ ತೆಗೆದುಕೊಂಡಿರೋದು ನಮಗೆ ಹೆಮ್ಮೆ ಇದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ಸಿದ್ದಲಿಂಗಯ್ಯ ಅವರು ನನಗೆ ಬಡವರಿಗೆ ಸಹಾಯ ಮಾಡಿ ಅಂತ ಅನೇಕ ಬಾರಿ ಹೇಳಿದ್ದರು. ಸಿದ್ದಲಿಂಗಯ್ಯ ಅವರ ಸ್ಮಾರಕ ಮಾಡಲು ಅನೇಕರ ಬೇಡಿಕೆ ಇದ್ದು, ಸಿಎಂ ಅವರು ಸಿದ್ದಲಿಂಗಯ್ಯ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ಕೊಡಬೇಕು ಎಂದು ಮನವಿ ಮಾಡಿದರು.
ಓದಿ: ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣ: ನಿಕಟಪೂರ್ವ ಐಜಿಪಿ, ಡಿವೈಎಸ್‍ಪಿ ಸೇರಿ ಹಲವರಿಗೆ ಸಿಐಡಿ ನೋಟಿಸ್