ಬೆಂಗಳೂರು: ಅನರ್ಹ ಶಾಸಕರ ಕುರಿತು ಸಿಎಂ ಯಡಿಯೂರಪ್ಪ ಮಾತನಾಡಿದ ಆಡಿಯೋ ವಿರುದ್ಧ ನಿನ್ನೆ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿರುವ ವಿಚಾರ ಕುರಿತಂತೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿ.ಎಸ್.ವೈ ಕಾಂಗ್ರೆಸ್ನವರದ್ದು ಹುಚ್ಚುತನದ ಪರಮಾವಧಿ. ಸಿದ್ದರಾಮಯ್ಯ ಪ್ರಚಾರ ಪ್ರಿಯರು. ಸಿದ್ದರಾಮಯ್ಯ ಒಬ್ಬ ವಕೀಲರಾಗಿ ಸರ್ಕಾರದ ಪರ ಮಾತಾಡೋದು ಸರಿಯಲ್ಲ. ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಜೊತೆಗೆ ವಾಸ್ತವಿಕ ಪ್ರಜ್ಞೆಯೇ ಇಲ್ಲ ಎಂದರು.
ನಾನು ಸಭೆಯಲ್ಲಿ ಅನರ್ಹ ಶಾಸಕರು ಅವರದ್ದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದೆ. ಸದ್ಯ ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ವಿಚಾರಣೆ ಇದೆ. ಕಾಂಗ್ರೆಸ್ ಸಂಚು ಮಾಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಲು ಈ ರೀತಿ ಮಾಡ್ತಿದ್ದಾರೆ. ಮತ್ತೊಂದೆಡೆ ಅಮಿತ್ ಷಾ ರಾಜೀನಾಮೆ ಕೊಡಬೇಕೆಂದು ತಿಳಿಸಿದ್ದಾರೆಂದು ಆರೋಪಿಸಿದ್ದು ಮೂರ್ಖತನದ ಪರಮಾವಧಿ. ಈಗ ರಾಜೀನಾಮೆ ಕೊಟ್ಟಿರೋರಿಗೆ ಟಿಕೆಟ್ ಕೊಡ್ತೀನಿ ಅಂತ ನಾನು ಹೇಳಿಲ್ಲ. ಸಿದ್ದರಾಮಯ್ಯ ತಾನೇ ದೊಡ್ಡ ಲೀಡರ್ ಅಂತ ಅಂದ್ಕೊಂಡು ಸುಳ್ಳು ಪ್ರಚಾರ ಮಾಡ್ತಿದ್ದಾರೆ. ಅನರ್ಹರು ತಮ್ಮದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಆಡಿಯೋ ವೈರಲ್ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅನರ್ಹರು ಮುಂಬೈಗೆ ಹೋಗಿದ್ದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಆ ಮಾತನ್ನೇ ನಾನು ಹೇಳಿದ್ದೇನೆ. ಅದಕ್ಕೂ ಅಮಿತ್ ಶಾಗೂ ಏನ್ ಸಂಬಂಧ? ಸಿದ್ದರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾರೂ ಅವರಿಗೆ ಗೌರವ ಕೊಡಲ್ಲ, ಸಿದ್ದರಾಮಯ್ಯನವ್ರ ನಡವಳಿಕೆಯನ್ನು ಕಾಂಗ್ರೆಸ್‌ನವ್ರೇ ಇಷ್ಟಪಡಲ್ಲ ಎಂದು ಬಿಎಸ್ವೈ ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ಬಿಜೆಪಿಗೆ ಜೆಡಿಎಸ್ ಬೇಷರತ್ ಬೆಂಬಲ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಇಂತಹ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದರು.