ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆಯ ಸ್ಥಾನವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೂ ಆ್ಯಪ್ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು, ಇಂತಹ ಪ್ರಯತ್ನಗಳು ಹೆಚ್ಚಾಗಲಿ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರೋತ್ಸಾಹಿಸಿದ್ದಾರೆ.
ಕೂ ಆ್ಯಪ್ ವತಿಯಿಂದ ವರ್ಚುವಲ್ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಕೂ ಆ್ಯಪ್ ಅನ್ನು ಟ್ವಿಟರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಮಾತೃಭಾಷೆಯಲ್ಲೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅನುಕೂಲವಾಗುವ ರೀತಿಯಲ್ಲಿ ಈ ಆ್ಯಪ್ ಅನ್ನು ತಯಾರಿಸಿದ್ದಾರೆ. ಕನ್ನಡದವರೇ ಆದ ಅಪ್ರಮೇಯ ಅವರು ಈ ಪ್ರಯತ್ನ ನಡೆಸಿರುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೆ, ಇತ್ತೀಚೆಗೆ ಪ್ರಧಾನಿ ಅವರು 'ಆತ್ಮ ನಿರ್ಭರ್ ಸ್ಪರ್ಧೆ' ಆಯೋಜಿಸಿ ದೇಶಾದ್ಯಂತ ಈ ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಎಲ್ಲವನ್ನು ಹಿಂದಿಕ್ಕಿ ಕೂ ಆ್ಯಪ್ ಮೊದಲ ಸ್ಥಾನ ಪಡೆದುಕೊಂಡಿರುವುದು ರಾಜ್ಯದ ಕೀರ್ತಿ ಹೆಚ್ಚಿಸಿದಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ಅನಿವಾರ್ಯತೆ ಇದೆ. ಕೂ ಆ್ಯಪ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಪ್ರತಿಯೊಬ್ಬ ಕನ್ನಡಿಗರು ಈ ಆ್ಯಪ್ ಬಳಸುವ ಮೂಲಕ ಕನ್ನಡವನ್ನು ಬೆಳೆಸಲಿ ಎಂದು ಶುಭ ಕೋರಿದರು.
ಕೂ ಆ್ಯಪ್‌ನ ಸಿಇಒ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ಕೂ ಆ್ಯಪ್‌ನನ್ನು ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ. ಎಲ್ಲಾ ಕ್ಷೇತ್ರದ ಜನರು ಸಹ ಈ ಆ್ಯಪ್‌ನಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಾಸ್ಯನಟ ಪ್ರಾಣೇಶ್, ನಟಿ ನೀತು ಶೆಟ್ಟಿ, ನಟ ನವೀನ್ ಕೃಷ್ಣ ಪಾಲ್ಗೊಂಡಿದ್ದರು.