ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದವರ ಪತ್ತೆಗೆ ಸಹಕಾರ ನೀಡುವಂತೆ ಮುಸ್ಲಿಂ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ದೆಹಲಿ ಸಭೆಯಿಂದ ವಾಪಸ್ ಆಗಿರುವವರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತೆರಳಿದ್ದು, ಅವರ ಪತ್ತೆ ಕಾರ್ಯ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೀಗಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ವೈ ಮುಸ್ಲಿಂ ಮುಖಂಡರ ಸಭೆ ನಡೆಸಿದರು. ಈ ಸಭೆಯಲ್ಲಿ ಶಾಸಕ ಜಮೀರ್ ಅಹಮ್ಮದ್, ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಸೇರಿದಂತೆ ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.
ನಿಮ್ಮ ಭಾಗದಲ್ಲಿ ಯಾರಾದರೂ ಹೋಗಿದ್ದರೆ ಅವರನ್ನು ಪತ್ತೆ ಹಚ್ಚಿ ಕ್ವಾರಂಟೇನ್ ಮಾಡಿಸುವ ಕುರಿತು ಚರ್ಚಿಸಿದರು. ಸಮುದಾಯದವರಿಗೂ ತಿಳಿ ಹೇಳಿ ಸರ್ಕಾರಕ್ಕೆ ಮಾಹಿತಿ ನೀಡಿ, ವೈದ್ಯಕೀಯ ತಪಾಸಣೆ ನಡೆಸಿಕೊಳ್ಳುವಂತೆ ಮನವೊಲಿಸಿ ಎಂದು ಸಿಎಂ ಮುಸಲ್ಮಾನ ಮುಖಂಡರಿಗೆ ಮನವಿ ಮಾಡಿದರು.
ಇದೇ ವೇಳೆ ಪ್ರಾರ್ಥನೆಯನ್ನು(ನಮಾಜ್) ಮನೆಯಲ್ಲಿ ಸಲ್ಲಿಸುವ ಕುರಿತು ಚರ್ಚೆ ನಡೆಯಿತು. ಲಾಕ್ ಡೌನ್ ಇರುವುದರಿಂದ ಮಸೀದಿಗೆ ಬರುವುದು ಬಿಟ್ಟು ಮನೆಯಲ್ಲಿಯೇ ಪ್ರಾರ್ಥಿಸುವಂತೆ ಸಿಎಂ ಸೂಚಿಸಿದರು.
ಮುಸ್ಲಿಂ ಮುಖಂಡರೊಂದಿಗಿನ ಸಭೆಯ ಮುಖ್ಯಾಂಶಗಳು:
• ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರ ಸಹಕಾರ ಕುರಿತಂತೆ ಸಿಎಂ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ
• ನಿಜಾಮುದ್ದೀನ್ ತಬ್ಲಿಗಿ ಮರ್ಕಜ್‌ಗೆ ಭೇಟಿ ನೀಡಿದ್ದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ, ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿ ಮುಸ್ಲಿಂ ಮುಖಂಡರ ಭರವಸೆ
• ಕೊರೊನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರೂ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರು.
• ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ತಮ್ಮ ಸಮುದಾಯದ ಜನರ ಮನವೊಲಿಸುವುದಾಗಿ ಭರವಸೆ ನೀಡಿದ್ದಾರೆ.
ಅಂತಿಮವಾಗಿ ರಾಜ್ಯದ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ನಾವೆಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೊನಾ ವಿರುದ್ಧದ ಸಮರ ಜಯಿಸೋಣ ಎಂದು ಸಿಎಂ ಮನವಿ ಮಾಡಿದರು.