ಬೆಂಗಳೂರು: ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಹುಟ್ಟುಹಬ್ಬದ ಶುಭ ಕೋರಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುವ ವಿಚಾರದಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ ವಿರುದ್ಧ ಹೈಕಮಾಂಡ್ ಗೆ ಪತ್ರ ಹೋಗಿರೋದು ಸುಳ್ಳು ಎಂದರು.
ಇದೇ ವೇಳೆ ಬಸ್ ದರ ಏರಿಕೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಲಕ್ಷ್ಮಣ್ ಸವದಿ, ಬಸ್ ದರ ಕುರಿತು ಆದೇಶವನ್ನು ಕುಮಾರಸ್ವಾಮಿ ನೋಡಿಲ್ಲ ಬಡವರಿಗೆ ಹೊರೆಯಾಗದ ರೀತಿ ದರ ಏರಿಕೆ ಮಾಡಲಾಗಿದೆ. 2014 ರಿಂದ ಇಲ್ಲಿಯವರೆಗೂ ಬಸ್ ದರ ಏರಿಕೆ ಮಾಡಿರಲಿಲ್ಲ. ಸಾರಿಗೆ ನಿಗಮಗಳು ತುಂಬಾ ಕಷ್ಟದಲ್ಲಿವೆ ಈ ನಷ್ಟ ಸರಿದೂಗಿಸಲು ಬಸ್ ದರ ಏರಿಕೆ ಮಾಡಿದ್ದೇವೆ ಎಂದರು.
ಸಿಎಂಗೆ ಹುಟ್ಟುಹಬ್ಬದ ಶುಭ ಕೋರಿ ಮಾತನಾಡಿದ ಬಿಜೆಪಿ ನಾಯಕ ಸಿಸಿ ಪಾಟೀಲ್, ಯಡಿಯೂರಪ್ಪನವರಿಗೆ ದೇವರು ಆರೋಗ್ಯ ಆಯಸ್ಸು ಕೊಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.