ಬೆಂಗಳೂರು: ತಮ್ಮ ಕುಟುಂಬ ಸದಸ್ಯರು ನಡೆಸಿರುವ ಭ್ರಷ್ಟಾಚಾರದ ತನಿಖೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ಧರಿಲ್ಲ. ಆರೋಪ ಸಾಬೀತಾದರೆ ರಾಜೀನಾಮೆ ಕೊಡುತ್ತೇನೆ ಎಂದು ಬಾಯಿಮಾತಿಗಷ್ಟೇ ಅವರು ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ನಡೆಸಿರುವ ಭ್ರಷ್ಟಾಚಾರವನ್ನು ತನಿಖೆಗೆ ವಹಿಸಬೇಕು. ಒಂದು ವೇಳೆ ಆರೋಪ ಸಾಬೀತಾಗದಿದ್ದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದೇ ಸಾಬೀತಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಎಸ್ವೈ ಗೆ ಹೇಳಿದ್ದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಿ. ಆರೋಪ ಸಾಬೀತಾಗದೆ ಇದ್ದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದಿದ್ದೆ. ನಾನು ಹಾಕಿದ ಈ ಸವಾಲನ್ನು ಅವರು ಸ್ವೀಕರಿಸಬೇಕಿತ್ತು. ಆದರೆ, ಅವರು ಅನಗತ್ಯ ಚರ್ಚೆ ಮಾಡುತ್ತಿದ್ದಾರೆ ಎಂದರು.
ಉತ್ತರಪ್ರದೇಶದ ದಲಿತ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿದ ಸಿದ್ದರಾಮಯ್ಯ, ಅಲ್ಲಿ ಬಿಜೆಪಿಯ ಸರ್ಕಾರವೇ ಅಧಿಕಾರದಲ್ಲಿದೆ. ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ಸರ್ಕಾರ ಇದ್ದಾಗ ನಿರ್ಭಯಾ ಪ್ರಕರಣದಲ್ಲಿ, ಅವರ ಮೇಲೆ ಭಾರಿ ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದರು. ಇಂದು ಉತ್ತರಪ್ರದೇಶದಲ್ಲಿ ಬಡ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆ ಯುವತಿ ಸಾವನ್ನಪ್ಪಿದ್ದಾಳೆ. ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಆದರೆ, ಉತ್ತರಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಭೂಸುಧಾರಣೆ ಎಪಿಎಂಸಿ ಕಾಯ್ದೆ ಪ್ರಸ್ತಾಪ:
ಕೆಳಮನೆಯಲ್ಲಿ ಪಾಸಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಮೇಲ್ಮನೆಯಲ್ಲಿ ಇನ್ನೂ ಪಾಸ್ ಆಗಿಲ್ಲ. ಇದು ಇನ್ನೂ ಮುಗಿದಿಲ್ಲ, ಈಗಿನ್ನೂ ಆರಂಭವಾಗುತ್ತಿದೆ ಅಷ್ಟೇ. ಮೇಲ್ಮನೆಯಲ್ಲಿ ಎರಡು ವಿಧೇಯಕಗಳು ಒಪ್ಪಿಗೆ ಪಡೆಯದ ಹಿನ್ನೆಲೆ ಮತ್ತೊಮ್ಮೆ ಆರ್ಡಿನೆನ್ಸ್ ಮೂಲಕ ಜಾರಿಗೆ ತರಬೇಕಾಗಿದೆ. ಕೈಗಾರಿಕಾ ಕಾನೂನು ಸಂಬಂಧ ವಿಧೇಯಕ ಕೂಡ ಮೇಲ್ಮನೆಯಲ್ಲಿ ಬಿದ್ದುಹೋಗಿದೆ. ಅದು ಮರಳಿ ವಿಧಾನಸಭೆಗೆ ಬರಬೇಕಾಗುತ್ತದೆ. ನೋಡೋಣ ಎಲ್ಲವೂ ಈಗ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ನಾವು ನಮ್ಮ ಪ್ರಣಾಳಿಕೆಯಲ್ಲಿ ಎಪಿಎಂಸಿ ಸಂಬಂಧ ಹಾಕಿದ್ದ ವಿಷಯವನ್ನು ಕೇಂದ್ರ ಹಣಕಾಸು ಸಚಿವರು ಅಪಾರ್ಥವಾಗಿ ಬಿಂಬಿಸಿದ್ದಾರೆ. ನಾವು ಪ್ರಣಾಳಿಕೆಯ ಪೂರ್ಣ ವಿವರದಲ್ಲಿ ಎಲ್ಲ ಮಾಹಿತಿಯನ್ನು ಒದಗಿಸಿದ್ದು, ಎಪಿಎಂಸಿ ಅಧಿಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ ನೀಡುತ್ತೇವೆ ಎಂದು ತಿಳಿಸಿದ್ದೇವೆ. ಆದರೆ, ಅದನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ಸದ್ಯ ಎಪಿಎಂಸಿ ಮಾರುಕಟ್ಟೆಗಳು ತಾಲೂಕು ಮಟ್ಟದಲ್ಲಿ ಇದ್ದು, ಇವನ್ನು ಗ್ರಾಮಪಂಚಾಯತ್ ಮಟ್ಟಕ್ಕೆ ವಿಸ್ತರಿಸುವ ಮೂಲಕ ಮಾರುಕಟ್ಟೆಯನ್ನು ಹೆಚ್ಚಿಸುತ್ತೇವೆ ಎಂದು ಹೇಳಿದ್ದೇವೆ ಎಂದರು.
ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳಲ್ಲಿ ಶೇಕಡ 15ರಷ್ಟು ಕರ್ನಾಟಕದಲ್ಲಿಯೇ ಸಂಭವಿಸುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರೋಗವನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ ಎಂದಿರುವ ಸಚಿವ ಡಾ. ಕೆ. ಸುಧಾಕರ್ ಅವರು ರಾಜೀನಾಮೆ ನೀಡಿ ನಿರ್ಗಮಿಸಲಿ. ಆಗಲ್ಲ ಅಂತ ಅಸಹಾಯಕತೆಯನ್ನು ವ್ಯಕ್ತಪಡಿಸುವವರು ಸ್ಥಾನದಲ್ಲಿದ್ದು, ಉಪಯೋಗವಿಲ್ಲ ಎಂದರು.