ಬೆಂಗಳೂರು: ದೇಶದ ಕೊರೊನಾ ಹಾಟ್ ಸ್ಪಾಟ್ ಸಿಟಿಯಾಗುತ್ತಿರುವ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ಕುರಿತು ಸಂಜೆ ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ರಿಂದ 5.30 ರವರೆಗೆ ಬಿಬಿಎಂಪಿಯ ಎಂಟು ವಲಯಗಳ ಸ್ಥಿತಿಗತಿ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿ ವಸ್ತುಸ್ಥಿತಿಯ ವಿವರ ಪಡೆದುಕೊಳ್ಳಲಿರುವ ಸಿಎಂ, ವಲಯಾವಾರು ಸೋಂಕಿನ ಪ್ರಮಾಣ, ಹರಡುವಿಕೆ ಪ್ರಮಾಣ, ಸಾವಿನ ಪ್ರಮಾಣ, ಪರೀಕ್ಷೆಯ ಸಂಖ್ಯೆ, ಬೆಡ್ ಗಳ ಲಭ್ಯತೆ, ಆಕ್ಸಿಜನ್ ಕೊರತೆ, ವೆಂಟಿಲೇಟರ್ ಸೌಲಭ್ಯ ಸೇರಿದಂತೆ ವಿಸ್ತೃತ ಮಾಹಿತಿ ಪಡೆಯಲಿದ್ದಾರೆ.
ಕೊರೊನಾ ತಪಾಸಣೆ ಹೆಚ್ಚಳ, ಸೋಂಕಿನ ಪ್ರಮಾಣ ಇಳಿಕೆ, ಮರಣದ ಪ್ರಮಾಣ ಇಳಿಕೆ ಕುರಿತು ಕಟ್ಟು ನಿಟ್ಟಿನ ಕ್ರಮದೊಂದಿಗೆ ಕೊರೊನಾ ನಿಯಂತ್ರಣ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಲಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರು ಹೆಸರು ಪ್ರಸ್ತಾಪ ಮಾಡಿ ನಿಯಂತ್ರಣಕ್ಕೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಕಳೆದ ವಾರ 10 ಜಿಲ್ಲೆಗಳ ಜಿಲ್ಲಾಡಳಿತದ ಜೊತೆ ವಿಡಿಯೋ ಸಂವಾದ ನಡೆಸಿದ್ದ ಸಿಎಂ ಇಂದು ಬೆಂಗಳೂರು ಕುರಿತು ಪ್ರತ್ಯೇಕವಾಗಿ ಖುದ್ದು ಅಧಿಕಾರಿಗಳು, ವಲಯಗಳ ಉಸ್ತುವಾರಿ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.