ರಾಜ್ಯದಲ್ಲಿ ಮುಂಗಾರು ಕೊರತೆ: ಬರ ಘೋಷಣೆಗಾಗಿ ಕಠಿಣ ಮಾನದಂಡ ಸಡಿಲಿಸಲು ಕೋರಿ ಕೇಂದ್ರಕ್ಕೆ ಸಿಎಂ ಪತ್ರ - ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ಪತ್ರ
Karnataka Monsoon: ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಬರ ಘೋಷಣೆ ಮಾಡಲು ಕೇಂದ್ರದ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆ ಉಂಟಾಗಿದ್ದು, ಬರಗಾಲ ಘೋಷಣೆಗೆ ಕೇಂದ್ರದ ಷರತ್ತುಗಳು ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಸಡಿಲಿಕೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ಪತ್ರ ಬರೆದಿದ್ದಾರೆ.
ಬರ ಪರಿಹಾರಕ್ಕೆ ಕೇಂದ್ರ ಶೇಕಡ 75ರಷ್ಟು ಅನುದಾನ ನೀಡಿದರೆ, ರಾಜ್ಯ ಸರ್ಕಾರ ಶೇಕಡ 25ರಷ್ಟು ಅನುದಾನ ನೀಡಲಿದೆ. ಹೀಗಾಗಿ ಕೇಂದ್ರದ ಷರತ್ತುಗಳನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಕೋರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಕೃಷಿ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಪತ್ರದಲ್ಲಿ ಏನಿದೆ: ಸಿಎಂ ಸಿದ್ದರಾಮಯ್ಯ, ಬರ ನಿರ್ವಹಣೆ 2016 ನಿಯಮದಡಿ ಬರ ಘೋಷಣೆ ಮಾಡಲು ಕಠಿಣ ಮಾನದಂಡಗಳಿವೆ. ಈ ಕಠಿಣ ಮಾನದಂಡವನ್ನು ಸಡಿಲುಸುವುದು ಅತ್ಯಗತ್ಯವಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮರು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರಸಕ್ತ ಮಾನ್ಸೂನ್ ಋತುವಿನಲ್ಲಿ ಕರ್ನಾಟಕದಲ್ಲಿ ಸಹಜವಾಗಿ ಆಗಬೇಕಾದ 336 ಮಿ.ಮೀ. ಮಳೆಯ ಬದಲು 234 ಮಿ.ಮೀ. ಮಳೆ ಆಗಿದೆ. ಸುಮಾರು 34% ಮಳೆಯ ಕೊರತೆಯಾಗಿದೆ. ವಿಳಂಬ ಮಾನ್ಸೂನ್ನಿಂದ ಜೂನ್ ತಿಂಗಳಲ್ಲಿ ಸುಮಾರು 56% ಮಳೆಯ ಕೊರತೆ ಎದುರಾಗಿದೆ. ಹಲವು ತಾಲೂಕುಗಳಲ್ಲಿ ಬರ ರೀತಿಯ ಪರಿಸ್ಥಿತಿ ಇದೆ. ಕಠಿಣ ಮಾನದಂಡಗಳಿಂದ ಹಲವು ತಾಲೂಕುಗಳಲ್ಲಿ ಬರ ಎಂದು ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಿಎಂ ವಿವರಿಸಿದ್ದಾರೆ.
ಷರತ್ತು ಕೈಬಿಡುವಂತೆ ಮನವಿ: ಬರ ಘೋಷಣೆ ಮಾಡಬೇಕಾದರೆ ರಾಜ್ಯ ಸರ್ಕಾರ ರೈತರು ಬಿತ್ತನೆ ಮಾಡಬಾರದು ಎಂಬ ಸೂಚನೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂಬ ಷರತ್ತು ಇದೆ. ರೈತರಿಗೆ ಈ ರೀತಿಯ ಸೂಚನೆ ನೀಡುವುದು ಅಸಾಧ್ಯವಾಗಿರುವ ಕಾರಣ ಈ ಷರತ್ತನ್ನು ಪ್ರಮುಖವಾಗಿ ಕೈಬಿಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಅತಿವೃಷ್ಠಿಯಿಂದಾಗಿ ಶೇಕಡ 33ರಷ್ಟು ಬೆಳೆ ಹಾನಿಯಾದರೆ ಪರಿಹಾರ ನೀಡಲಾಗುತ್ತದೆ. ಆದರೆ, ಬರ ಘೋಷಣೆಗೆ ಶೇಕಡ 59ರಷ್ಟು ಬೆಳೆ ಹಾನಿಯಾಗಿರಬೇಕು ಎಂಬ ಮಾನದಂಡ ಇದೆ. ಇದರಿಂದ ರೈತರಿಗೆ ಬರ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶೇಕಡ 50ರಷ್ಟು ಇರುವುದನ್ನು ಶೇಕಡ 33ಕ್ಕೆ ಇಳಿಕೆ ಮಾಡಬೇಕು ಎಂದು ಕೋರಲಾಗಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿವೇಶನದೊಳಗೆ ಮತ್ತು ಹೊರಗೆ ಬರ ಘೋಷಣೆಗೆ ಇರುವ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಕೋರಿ ಮುಖ್ಯಮಂತ್ರಿಗಳು ಪತ್ರ ಬರೆಯಲಿದ್ದಾರೆ ಎಂದಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಪತ್ರ ಬರೆದು ಬರಘೋಷಣೆಗೆ ಇರುವ ಮಾನದಂಡಗಳನ್ನು ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಹಲವೆಡೆ ಎದುರಾಗಿರುವ ಬರಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಕೆಲವು ತಾಲೂಕುಗಳಲ್ಲಿ ಬರದ ಛಾಯೆ ಇದೆ. ಕೇಂದ್ರದ ಮಾನದಂಡಗಳ ಪ್ರಕಾರ ಶೇಕಡ 60ರಷ್ಟು ಮಳೆಯ ಕೊರತೆ ಆಗಿರಬೇಕು ಮತ್ತು ಕನಿಷ್ಠ ಮೂರು ವಾರ ಸತತವಾಗಿ ಮಳೆ ಬಂದಿರಬಾರದು. ಇದರ ಬದಲಿಗೆ ರಾಜ್ಯದ ಸಮಗ್ರ ಚಿತ್ರಣವನ್ನು ನೋಡಿ ಘೋಷಣೆಗೆ ಅವಕಾಶ ಮಾಡಿಕೊಡಬೇಕು. ಶೇಕಡ 60ರಷ್ಟು ಇರುವ ಮಳೆಯ ಕೊರತೆಯನ್ನು ಶೇಕಡ 30ಕ್ಕೆ ಇಳಿಕೆ ಮಾಡಬೇಕು ಮತ್ತು ಮೂರು ವಾರ ಸತತವಾಗಿ ಮಳೆ ಆಗಿರಬಾರದು ಎಂಬ ಮಾನದಂಡವನ್ನು ಬದಲಿಸಿ ಅದನ್ನು ಎರಡು ವಾರಕ್ಕೆ ಇಳಿಕೆ ಮಾಡಬೇಕು ಎಂಬ ಸಲಹೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮಳೆ ಕೊರತೆ.. ರೈತರು ಹೆಚ್ಚು ನೀರು ಬೇಕಾಗುವ ಬೆಳೆ ಬೆಳೆಯಬಾರದು: ಸಚಿವ ಕೃಷ್ಣ ಬೈರೇಗೌಡ