ಬೆಂಗಳೂರು: ಕರ್ನಾಟಕಕ್ಕೆ 50ರ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಲು ಯೋಜನೆ ರೂಪಿಸಲಾಗಿದೆ. ಕನ್ನಡ ನಾಡು, ನುಡಿ, ಪರಂಪರೆ ಸಂಸ್ಕೃತಿಯ ಹಿರಿಮೆಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯಲಿವೆ. ಇಂದು ಎಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆಯಾಗುತ್ತಿದೆ. ನಾಳೆ ಸಂಜೆ ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯಾದ್ಯಂತ ಸಂಚರಿಸಲಿರುವ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡುವರು.
ಕನ್ನಡ ಭಾಷಿಕರು, ಪ್ರದೇಶಗಳು ಏಕೀಕರಣವಾದ ರಾಜ್ಯೋತ್ಸವ ಸಡಗರ ಹಾಗೂ ಕರ್ನಾಟಕವೆಂದು ಮರು ನಾಮಕರಣವಾಗಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸುವರ್ಣ ಸಂಭ್ರಮ ಈ ಬಾರಿ ವಿಜೃಂಭಿಸಲಿದೆ. ಕನ್ನಡ ನಾಡು, ನುಡಿ, ಪರಂಪರೆ, ಸಂಸ್ಕೃತಿಯ ಹಿರಿಮೆ ಗರಿಮೆಯ ಉಲ್ಲಾಸದಲ್ಲಿ ಸರ್ಕಾರ ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿದ್ದು, ಸಂಘ- ಸಂಸ್ಥೆಗಳು ಅಷ್ಟೇ ಉತ್ಸಾಹದಿಂದ ಸಿದ್ಧಗೊಂಡಿವೆ. 'ಕರ್ನಾಟಕ ಸುವರ್ಣ ಸಂಭ್ರಮ' ವರ್ಷಪೂರ್ತಿ ಆಚರಿಸಲು ನೀಲನಕ್ಷೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲ ದಿನವಾದ ಇಂದು ಜನರ ಮನ-ಮನೆಯ ಹಬ್ಬವಾಗಿಸಲು ಮಾರ್ಗಸೂಚಿ ಹಾಕಿಕೊಟ್ಟಿದೆ.
ರಾಜ್ಯದೆಲ್ಲೆಡೆ ರಾಜ್ಯೋತ್ಸವ ಕಾರ್ಯಕ್ರಮಗಳು: ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲರ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ, 'ಕರ್ನಾಟಕ ಸಂಭ್ರಮ-50: ಉಸಿರಾಯಿತು. ಕರ್ನಾಟಕ ಹೆಸರಾಗಲಿ ಕರ್ನಾಟಕ' ಎನ್ನುವ ಘೋಷ ವಾಕ್ಯ ಬರೆಯುವುದು ಇದರ ಮುಖ್ಯ ಉದ್ದೇಶ. ಎಲ್ಲ ಜಿಲ್ಲಾ, ತಾಲೂಕು, ಗ್ರಾ.ಪಂ. ಕೇಂದ್ರಗಳಲ್ಲಿ ರಾಷ್ಟ್ರ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ ಹಾಡುವುದು ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗಿದೆ. ಹುಯಿಲಗೋಳ ನಾರಾಯಣ ಅವರ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು', ಕುವೆಂಪು ಅವರ 'ಎಲ್ಲಾದರು ಇರು ಎಂತಾದರು ಇರು', ದ.ರಾ. ಬೇಂದ್ರೆಯವರ 'ಒಂದೇ ಒಂದೇ ಕರ್ನಾಟಕ ಒಂದೇ', ಸಿದ್ದಯ್ಯ ಪುರಾಣಿಕರ 'ಹೊತ್ತಿತೋ ಹೊತ್ತಿತು ಕನ್ನಡದ 6 ದೀಪ' ಮತ್ತು ಚನ್ನವೀರ ಕಣವಿಯವರ 'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸಲಾಗುತ್ತಿದೆ.
ಕೆಂಪು- ಹಳದಿ ಬಣ್ಣದ ಗಾಳಿಪಟ ಹಾರಾಟ: ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳು, ಸರ್ಕಾರಿ, ಅರೆಸರ್ಕಾರಿ, ನಿಗಮ ಮಂಡಳಿಗಳ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಸಂಘ-ಸಂಸ್ಥೆಗಳು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಅಳ ವಡಿಸಿಕೊಂಡು 5 ಗೀತೆಗಳನ್ನು ಹಾಡುವುದು ಕಡ್ಡಾಯ ಮಾಡಲಾಗಿದೆ. ಸಂಜೆ 5ಕ್ಕೆ ಆಯಾ ಊರಿನ ಮೈದಾನಗಳಲ್ಲಿ ಕೆಂಪು-ಹಳದಿ ಬಣ್ಣದ ಗಾಳಿಪಟವನ್ನು ಬಾನೆತ್ತರಕ್ಕೆ ಹಾರಿಸುವುದು. ಅದೇ ರೀತಿ ರಾತ್ರಿ 7ಕ್ಕೆ ಪ್ರತಿಯೊಬ್ಬರ ಮನೆ, ಕಚೇರಿ, ಅಂಗಡಿ ಮಳಿಗೆಗಳ ಮುಂದೆ ಹಣತೆಯಲ್ಲಿ ಕನ್ನಡ ಜ್ಯೋತಿ ಬೆಳಗಿಸುವುದು ಪ್ರಮುಖ ಕಾರ್ಯಕ್ರಮವಾಗಿದೆ.
ಹಂಪಿಯಲ್ಲಿ ವಿಶೇಷ ಕಾರ್ಯಕ್ರಮಗಳು: ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಹೆಸರಾದಾಗ ಅಂದು ಹಂಪಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದಿದ್ದವು. ಅದೇ ರೀತಿಯಲ್ಲಿ ನಾಳೆ (ನ.2) ಕೂಡ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗಂಗಾ ಜಲಾಭಿಷೇಕ, ಭುವನೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಗಣ್ಯರು ಭಾಗಿಯಾಗಿ ಜಾನಪದ ಕಲಾ ತಂಡಗಳಿಂದ ರಥಬೀದಿಯಲ್ಲಿ ಮೆರವಣಿಗೆ ನಡೆಸುವುದರ ಜೊತೆಗೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ, ಎದುರು ಬಸವಣ್ಣ ಮಂಟಪದ ಮುಂದೆ 'ಕನ್ನಡಜ್ಯೋತಿ ರಥಯಾತ್ರೆ'ಗೆ ಚಾಲನೆ ನೀಡಲಾಗುತ್ತದೆ. ರಾಜ್ಯಾದ್ಯಂತ ಎಲ್ಲ ಶಾಲೆ, ಕಾಲೇಜುಗಳಲ್ಲಿ ಭಾಷೆ, ನನ್ನ ಹಾಡು, ಪ್ರಬಂಧ, ರಸಪ್ರಶ್ನೆ, ಭಾಷಣ ಸ್ಪರ್ಧೆಗಳು ವಲಯ, ತಾಲೂಕು, ಜಿಲ್ಲಾ, ನಾಲ್ಕು ಕಂದಾಯ ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು ಉಚಿತ: ಸಿಎಂ ಸಿದ್ದರಾಮಯ್ಯ ಘೋಷಣೆ