ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಜಾಲಹಳ್ಳಿ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಕೋಟಿ ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿರುವ ಸರ್ಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರ್ಕಾರದ ಬಗ್ಗೆ ಛೀ ಥೂ ಎಂದು ಮಾತನಾಡುತ್ತಿದ್ದಾರೆ. ಆದರೆ, ಸರ್ಕಾರ ಹಿಂದೂ ಮತ್ತು ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರನಾಗಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಬರ ಪರಿಹಾರಕ್ಕೆ ಇದೇ ವಾರದಲ್ಲಿ 2 ಸಾವಿರ ರೂ. ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ, ಈವರೆಗೂ ಹಣ ಸಿಕ್ಕಿಲ್ಲ. ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. 15-20 ಸಾವಿರ ರೂ. ವೇತನಕ್ಕೆ ಯಾರೂ ಬರದೆ ಇರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಮಾಡಲಾಗಿದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ಕಾಂಗ್ರೆಸ್ ಸ್ಥಾಪಿಸಿದ್ದೇ ಬ್ರಿಟೀಷರು: ನಮ್ಮನ್ನು ಟಿಪ್ಪು ಪರ ಎನ್ನುವವರು ಬ್ರಿಟೀಷರ ಬೂಟು ನೆಕ್ಕುತ್ತಿದ್ದರು ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಹತಾಶರಾಗಿದ್ದು, ಅವರ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿ ಎತ್ತಿ ತೋರುತ್ತದೆ. ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಸೆಮಿಫೈನಲ್ ಗೆದ್ದಿದೆ. ಆದರೆ, ಕಾಂಗ್ರೆಸ್ ಫೈನಲ್‌ಗೆ ಬರುವ ಅವಕಾಶ ಕಳೆದುಕೊಂಡಿದೆ. ಅಲ್ಲದೇ, ರಾಹುಲ್ ಗಾಂಧಿ ಬದಲು ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಮಾಡಿ ಎಂದು ಒಕ್ಕೂಟದ ಸದಸ್ಯರು ಹೇಳಿದ್ದಾರೆ. ಇವೆಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ಸಿಗರು ಹತಾಶರಾಗಿದ್ದು, ಬೇರೆ ವಿಷಯಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಕಾಂಗ್ರೆಸ್ ಸ್ಥಾಪನೆ ಮಾಡಿದ್ದೇ ಬ್ರಿಟೀಷರು. ಅಂದಮೇಲೆ ಕಾಂಗ್ರೆಸ್ಸಿಗರು ಅವರ ಬೂಟು ನೆಕ್ಕಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಬ್ರಿಟೀಷರಿಂದ ಪಳಗಿದ ಕಾಂಗ್ರೆಸ್ಸಿಗರು ಅವರ ಕೈ ಕೆಳಗೆ ಕೆಲಸ ಮಾಡಿದ್ದರು. ಬಿಜೆಪಿಗೆ ಬ್ರಿಟೀಷರು ಎಂದೂ ಅಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ. ಯುದ್ಧ ಬಿಟ್ಟು ಓಡಿ ಬಂದು ಮಕ್ಕಳನ್ನು ಅಡಮಾನ ಇಟ್ಟ ಪಾಪಿ ಟಿಪ್ಪು ಸುಲ್ತಾನನನ್ನು ಕಾಂಗ್ರೆಸ್‌ನವರು ಬೆಂಬಲಿಸುತ್ತಾರೆ. ಭಗತ್‌ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಸುಭಾಷ್ ಚಂದ್ರ ಬೋಸ್ ರಕ್ತ ಹರಿಸಿ ಹೋರಾಟ ಮಾಡಿದ್ದರು. ಕನ್ನಡವನ್ನು ಕೊಂದವನು, ಹಿಂದುಗಳನ್ನು ಕೊಲ್ಲಲು ಕತ್ತಿ ಹಿಡಿದವನಾದ ಟಿಪ್ಪುವನ್ನು ಕಾಂಗ್ರೆಸ್‌ನವರು ಬೆಂಬಲಿಸುತ್ತಾರೆ. ಟಿಪ್ಪು ಯುದ್ಧ ಮಾಡಿ ಗೆಲ್ಲದೆ, ಮೈಸೂರು ಅರಸರನ್ನು ಜೈಲಿಗೆ ಕಳುಹಿಸಿ ಹೇಡಿತನದಿಂದ ಗೆದ್ದವನು. ಇಂತಹ ಮತಾಂಧನನ್ನು ಹೀರೋ ಮಾಡಲು ಹೋಗಬಾರದು ಎಂದರು.
ಎಲ್ಲ ಸ್ಥಾನಗಳನ್ನು ಗೆಲ್ಲುವ ಗುರಿ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲ ಸ್ಥಾನಗಳನ್ನೂ ಗೆಲ್ಲುವುದು ನಮ್ಮ ಗುರಿ. ಅದಕ್ಕಾಗಿ ಸಮರ್ಥರನ್ನು ಆಯ್ಕೆ ಮಾಡಲಾಗುತ್ತದೆ. ಜೆಡಿಎಸ್ ಕೂಡ ಈಗ ನಮ್ಮ ಜೊತೆಗಿದ್ದು ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಪಕ್ಷ ದುರ್ಬಲವಾಗಿರುವ ಕಡೆಗಳಲ್ಲಿ ಬಲ ಬರಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದಮ್ ಇದ್ದರೆ ಹಿಂದೂ ರಾಷ್ಟ್ರವಾಗುವುದನ್ನು ಸಿದ್ದರಾಮಯ್ಯ ತಡೆಯಲಿ: ಅನಂತಕುಮಾರ ಹೆಗಡೆ