ETV Bharat / state

ನಮ್ಮ ಕೈಗೆ ಬಡಿಗೆ ಕೊಟ್ಟು ಯಾಕೆ ಬಡಿಸಿಕೊಳ್ತೀರಿ?: ಅಶೋಕ್​ಗೆ ಸಿದ್ದರಾಮಯ್ಯ ಟಕ್ಕರ್ - R Ashok statement

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಹೇಳಿಕೆ ಮೂಲಕ ಟಕ್ಕರ್ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
author img

By ETV Bharat Karnataka Team

Published : Dec 25, 2023, 8:21 PM IST

ಬೆಂಗಳೂರು: ನಮ್ಮ ಸರ್ಕಾರ ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಯಾರೋ ಬಿಜೆಪಿ ವಿರೋಧಿಗಳು ಈ ರೀತಿಯ ಹೇಳಿಕೆಯನ್ನು ಅವರ ಬಾಯಿಯಿಂದ ಹೇಳಿಸಿದಂತೆ ಕಾಣುತ್ತಿದೆ. ಅಶೋಕ್ ಅವರೇ, ಯಾಕೆ ನಮ್ಮ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ತೀರಿ? ನರೇಂದ್ರ ಮೋದಿ ಅವರ ನೇತೃತ್ವದ ಕಳೆದ ಒಂಬತ್ತು ವರ್ಷಗಳ ಆಡಳಿತದ ಜಾತಕ ಬಿಡಿಸಿಟ್ಟರೆ ಯಾರು ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದ್ದಾರೆ ಎಂದು ನಿಮಗೂ ಅರಿವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಾಡಿಗೆ ಬರಗಾಲ ಬಿದ್ದು ಆರು ತಿಂಗಳುಗಳಾಗಿವೆ. ಬರ ಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂ. ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ನಾನೇ ಖುದ್ದಾಗಿ ಹೋಗಿ ಪ್ರಧಾನಮಂತ್ರಿ ಮತ್ತು ಗೃಹಸಚಿವ ಅವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ. ನಮ್ಮ ಕಂದಾಯ ಮತ್ತು ಕೃಷಿ ಸಚಿವರು ಹಣಕಾಸು ಸಚಿವರನ್ನು ಭೇಟಿ ಮಾಡಿ ಬಂದಿದ್ದಾರೆ. ಉಪಮುಖ್ಯಮಂತ್ರಿಗಳು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ನಮಗೆ ಅನ್ನ ನೀಡುವ ರೈತರು ಕನ್ನಡಿಗರಲ್ಲವೇ? ಅವರ ತಲೆ ಮೇಲೆ ಕಲ್ಲು ಹಾಕುತ್ತಿರುವವರು ಯಾರು ಎಂದು ಪತ್ರಿಕಾ ಹೇಳಿಕೆ ಮೂಲಕ ಸಿಎಂ ಪ್ರಶ್ನಿಸಿದ್ದಾರೆ.

ತೆರಿಗೆ ಪಾವತಿಯಲ್ಲಿ ಕನ್ನಡಿಗರು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ನ್ಯಾಯಯುತ ಪಾಲನ್ನೂ ಕೊಡದೆ ವಂಚಿಸುತ್ತಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳಿಗೆ ನೀಡುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಕೆಯ ಹಾದಿಯಲ್ಲಿದೆ. 2021-22ರ ಅವಧಿಯಲ್ಲಿ 20 ಸಾವಿರ ಕೋಟಿ ರೂಪಾಯಿ ಇದ್ದ ಅನುದಾನ, 2022-23ರಲ್ಲಿ 13 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಕನ್ನಡಿಗರ ತಲೆ ಕಲ್ಲು ಹಾಕುತ್ತಿರುವವರು ಯಾರು? ಯುಪಿಎ ಸರ್ಕಾರದ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನಿಗದಿಪಡಿಸಿದ್ದ ಶೇ.4.72 ತೆರಿಗೆ ಪಾಲನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ 15ನೇ ಹಣಕಾಸು ಆಯೋಗವು ಶೇ.3.64ಕ್ಕೆ ಇಳಿಕೆ ಮಾಡಿ ಕನ್ನಡಿಗರನ್ನು ವಂಚಿಸಿದೆ. ಇದರಿಂದ ಕನ್ನಡಿಗರು ಕಳೆದ 4 ವರ್ಷಗಳಲ್ಲಿ ಸುಮಾರು 45,000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈಗ ಹೇಳಿ ಅಶೋಕ್ ಅವರೇ, ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿರುವವರು ಯಾರು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಆದರೆ, ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಶಿಫಾರಸನ್ನು ತಿರಸ್ಕರಿಸಿ ಕನ್ನಡಿಗರಿಗೆ ದ್ರೋಹ ಎಸಗಿದರು. ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿದವರು ನಿಮ್ಮದೇ ಪಕ್ಷಕ್ಕೆ ಸೇರಿರುವ ನಿರ್ಮಲಾ ಸೀತಾರಾಮನ್ ಅವರಾ? ನಾವಾ? ಕನ್ನಡಿಗರು ಕೇಂದ್ರ ಸರ್ಕಾರಕ್ಕೆ 1 ರೂ. ತೆರಿಗೆ ಪಾವತಿಸಿದರೆ ಕರ್ನಾಟಕದ ಅಭಿವೃದ್ಧಿಗಾಗಿ ವಾಪಸ್‌ ಸಿಗುತ್ತಿರುವುದು ಕೇವಲ 15 ಪೈಸೆ. ಕನ್ನಡಿಗರು ಬೆವರು ಸುರಿಸಿ ದುಡಿದ ದುಡ್ಡನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಆರ್ಥಿಕ ವರ್ಷ ಆರಂಭವಾಗಿ 6 ತಿಂಗಳು ಕಳೆದರೂ ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಲೇ ಇರುವವರು ಯಾರು ಎಂದು ಟಕ್ಕರ್ ನೀಡಿದ್ದಾರೆ.

ಕರ್ನಾಟಕಕ್ಕೆ ಮೋದಿ ಹೂಮಳೆ ಸುರಿಸುತ್ತಿದ್ದಾರಾ?: ಏಮ್ಸ್ ಸಂಸ್ಥೆ ಬೇಕೆಂಬ ಕನ್ನಡಿಗರ ಬಹುಕಾಲದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಕನ್ನಡಿಗರು ಶ್ರಮದಿಂದ ಕಟ್ಟಿದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ಯಾರದೋ ಪಾಲಾದವು. 18 ಸಾವಿರ ಕೋಟಿ ರೂ. ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ಅನುದಾನ ಇಲ್ಲದೆ ಸೊರಗಿ ಹೋಗಿದೆ. ಇನ್ನು ರಾಜ್ಯದ ಇತರೆ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಸಿಕ್ಕಿದ್ದು ಬಿಡಿಗಾಸು ಹಣ. ಇದೇನು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಿಗರ ತಲೆಮೇಲೆ ಸುರಿಯತ್ತಿರುವ ಹೂಮಳೆಯೇ? ಇಲ್ಲವೇ ಕಲ್ಲುಗಳ ರಾಶಿಯೇ? ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕದಿದ್ದರೆ ಪ್ರಧಾನಿ ಮೋದಿ ಅವರ ಆಶೀರ್ವಾದ ಕರ್ನಾಟಕದ ಜನರಿಗೆ ಸಿಗುವುದಿಲ್ಲ, ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಹಣ ಬರುವುದಿಲ್ಲ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದೆಲ್ಲ ಅಮಿತ್‌ ಶಾ, ಜೆ.ಪಿ.ನಡ್ಡಾ ಅವರಂತಹ ರಾಷ್ಟ್ರ ನಾಯಕರೇ ಕನ್ನಡಿಗರಿಗೆ ಬೆದರಿಕೆ ಹಾಕಿದ್ದರು. ಸ್ವಾಭಿಮಾನಿ ಕನ್ನಡಿಗರು ಈ ಬೆದರಿಕೆಗೆ ಬಗ್ಗದೆ, ಜಗ್ಗದೆ ಬಿಜೆಪಿಯನ್ನು ಧೂಳೀಪಟ ಮಾಡಿದರು. ನಿಮ್ಮ ಪಕ್ಷಕ್ಕೆ ಕನ್ನಡಿಗರು ನೀಡಿದ ಈ ಶಿಕ್ಷೆಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕನ್ನಡಿಗರ ತಲೆಮೇಲೆ ಕಲ್ಲು ಹಾಕುತ್ತಿದೆಯೇ? ಎಂದು ಅಶೋಕ್ ವಿರುದ್ಧ ಸಿಎಂ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಟ್ಯಾಂಡ್ ಇಲ್ಲ, ಅವರದು ಬಸ್‌ ಸ್ಟ್ಯಾಂಡ್: ಪ್ರಹ್ಲಾದ್ ಜೋಶಿ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.