ಬೆಂಗಳೂರು: ಜಿಎಸ್‍ಟಿ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆಯ ಆಡಳಿತದಲ್ಲಿ ಬಳಕೆ ಮಾಡುವ ಸಲುವಾಗಿ 'ಡಿಜಿಟಲ್ ಸಾಕ್ಷ್ಯಗಳ ನಿರ್ವಹಣೆ ಪುಸ್ತಕ ಹಾಗೂ ಮೊಬೈಲ್ ಆ್ಯಪ್' ಅನ್ನು ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾಯದರ್ಶಿ ನಸೆರ್ ಅಹ್ಮದ್, ಗೋವಿಂದರಾಜು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, .ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಎಸ್ ಟಿ ದಿನಾಚರಣೆ: 2017 ರ ಜುಲೈ 01 ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದರಿಂದ ಜುಲೈ ಒಂದರಂದು ಜಿಎಸ್‍ಟಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಹೊಸ ತೆರಿಗೆ ಕಾನೂನಿಗೆ ವರ್ತಕ ಸಮೂಹದಿಂದ ದೊರೆತ ಅನುಪಾಲನೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ, ತೆರಿಗೆದಾರರು ನೀಡುತ್ತಿರುವ ದೇಣಿಗೆ ಗುರುತಿಸಿ, ಪ್ರಶಂಸಿಸುವ ಯೋಜನೆಯಾಗಿಯೂ ಜಿಎಸ್‍ಟಿ ದಿನಾಚರಣೆಯ ಧ್ಯೇಯವಾಗಿದೆ.
ಭಾರತದಲ್ಲಿನ ತೆರಿಗೆ ಪದ್ದತಿಯಲ್ಲಿನ ಸರಳೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವುದರ ಮೆರೆಗೆ ಜಿ ಎಸ್ ಟಿ ಪದ್ದತಿ ಬೀರಿದ ಪರಿಣಾಮವನ್ನು ಈ ಧ್ಯೇಯ ಎತ್ತಿ ತೋರಿಸುತ್ತದೆ. ವ್ಯಾಪಾರ ವಹಿವಾಟುಗಳಲ್ಲಿ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯಲ್ಲಿ ಜಿಎಸ್‍ಟಿ ತೆರಿಗೆ ಪದ್ದತಿಯು ತಂದುಕೊಟ್ಟಿರುವ ಅನುಕೂಲತೆಗಳನ್ನು ಸ್ಮರಿಸುವುದೂ ಕೂಡ ಸಹ ಈ ವರ್ಷದ ಜಿಎಸ್‍ಟಿ ದಿನಾಚರಣೆ ಧ್ಯೇಯವಾಗಿದೆ.
ಜೂನ್ ತಿಂಗಳ ಕೇಂದ್ರ ಸರ್ಕಾರದ ಜಿಎಸ್‍ಟಿ ಸಂಗ್ರಹ ಹೆಚ್ಚಳ: ಪ್ರಸಕ್ತ ಹಣಕಾಸಿನ ವರ್ಷದ ಜೂನ್ ತಿಂಗಳಲ್ಲಿ ಒಟ್ಟು ಕೇಂದ್ರ ಸರ್ಕಾರದ ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ಆದಾಯ ಸಂಗ್ರಹವು 1,61,497 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಇದೇ ಜೂನ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಶೇ.12ರಷ್ಟು ಜಿಎಸ್‍ಟಿ ಸಂಗ್ರಹ ಹೆಚ್ಚಳವಾಗಿದೆ ಎಂದು ನವದೆಹಲಿಯ ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.
ಜೂನ್ ತಿಂಗಳ ಒಟ್ಟು ಜಿಎಸ್‍ಟಿ ಆದಾಯ ಸಂಗ್ರಹದಲ್ಲಿ ಕೇಂದ್ರ ಜಿಎಸ್‍ಟಿ (ಸಿಜಿಎಸ್‌ಟಿ - CGST ) 31,013 ಕೋಟಿ ರೂ. ಮತ್ತು ರಾಜ್ಯ ಜಿಎಸ್‍ಟಿ (ಎಸ್‌ಜಿಎಸ್‌ಟಿ - SGST ) 38,292 ಕೋಟಿ ರೂ. ಹಾಗೂ ಸಮಗ್ರ ಜಿಎಸ್‍ಟಿ (ಐಜಿಎಸ್‌ಟಿ - IGST) 80,292 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 39,035 ಕೋಟಿ ರೂ. ಸೇರಿ) ಮತ್ತು ಸೆಸ್ 11,900 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,028 ಕೋಟಿ ರೂ. ಸೇರಿ) ಆಗಿದೆ ಎಂದು ಮಾಹಿತಿ ನೀಡಿದೆ.
ರಾಜ್ಯ ಸರ್ಕಾರದ ಜಾಹೀರಾತು: ಗೃಹಜ್ಯೋತಿ ಯೋಜನೆ ಆರಂಭವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪ್ರಜ್ವಲಿಸಲಿದೆ ಕರ್ನಾಟಕ ಎಂಬ ಶೀರ್ಷಿಕೆಯಡಿ ಗೃಹಜ್ಯೋತಿ ಪೋಸ್ಟರ್ ಬಿಡುಗಡೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಭಾವಚಿತ್ರದೊಂದಿಗೆ ಪ್ರಕಟವಾಗಿದೆ. ಇದರಲ್ಲಿ ಇಂದಿನಿಂದ ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್ ಉಚಿತ (ಗರಿಷ್ಠ 200 ಯೂನಿಟ್ ವರೆಗೆ) ಎಂದು ನಮೂದಿಸಲಾಗಿದೆ.
ಇದನ್ನೂಓದಿ:ಬಜೆಟ್ ಅಧಿವೇಶನದ ಹಿನ್ನೆಲೆ: ಜುಲೈ 3 ರಿಂದ 14ರ ವರೆಗೆ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ