ಬೆಂಗಳೂರು: ಲೋಕಾಯುಕ್ತ ವಿಚಾರಣೆಗೆ ವಿವಿಧ ಪ್ರಾಧಿಕಾರಗಳಿಂದ ಅನುಮತಿ ವಿಳಂಬವಾಗುತ್ತಿರುವ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಎಲ್ಲ ಇಲಾಖೆಗಳ ಮಾಹಿತಿ ಸಂಗ್ರಹಿಸಿ ಲೋಕಾಯುಕ್ತಕ್ಕೆ ಕಳುಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ವಿವಿಧ ಪ್ರಕರಣಗಳಲ್ಲಿ ಲೋಕಾಯುಕ್ತ ವಿಚಾರಣೆಗೆ ಅನುಮತಿ ನೀಡಲು ವಿಳಂಬ ಧೋರಣೆ ಸಲ್ಲದು. ಇದರಿಂದ ಜನತೆಗೆ ತಪ್ಪು ಸಂದೇಶ ಹೋಗಬಾರದು. ಆದ್ದರಿಂದ ತ್ವರಿತ ತೀರ್ಮಾನ ಕೈಗೊಂಡು ಲೋಕಾಯುಕ್ತರಿಗೆ ಆದೇಶಗಳನ್ನು ಕಳುಹಿಸುವಂತೆ ತಿಳಿಸಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.
155 ಪ್ರಕರಣ ಬಾಕಿ: ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳ ವಿಚಾರಣೆಗೆ ಅನುಮತಿ ಬಾಕಿ ಉಳಿದುಕೊಂಡಿದೆ. ಸುಮಾರು 155 ಪ್ರಕರಣಗಳ ಸಂಬಂಧ ಅಭಿಯೋಜನಾ ಅನುಮತಿ ಬಾಕಿ ಉಳಿದಿದೆ. ಸಕ್ಷಮ ಪ್ರಾಧಿಕಾರಿಗಳಿಂದ ಅಭಿಯೋಜನೆ ಮಂಜೂರಾತಿ ವಿಳಂಬವಾಗುತ್ತಿದೆ. ಸುಮಾರು 20ಕ್ಕೂ ಅಧಿಕ ಇಲಾಖೆಗಳು ಮಂಜೂರಾತಿ ನೀಡಿಲ್ಲ.
ಹೀಗಾಗಿ ಆರೋಪಿಗಳ ವಿಚಾರಣೆ ಸಾಧ್ಯವಾಗದೇ ಬಾಕಿ ಉಳಿದುಕೊಂಡಿದೆ. ಆರೋಪಿ ಸರ್ಕಾರಿ ನೌಕರರ ವಿಚಾರಣೆಗೆ ಮಂಜೂರಾತಿ ನೀಡಲು ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಲೋಕಾಯುಕ್ತ ಸಂಸ್ಥೆ ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ನೇತೃತ್ವದಲ್ಲಿ ವಿವಿಧ ಸಕ್ಷಮ ಪ್ರಾಧಿಕಾರಗಳಲ್ಲಿ ಅಭಿಯೋಜನಾ ಮಂಜೂರಾತಿಗಾಗಿ ಬಾಕಿ ಇರುವ ಪ್ರಕರಣಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನು ಗುರುತಿಸಿ, ಅನುದಾನ ಹಂಚಿಕೆ ಮಾಡಬೇಕು. ಅಲ್ಪಸಂಖ್ಯಾತರಿಗೆ ಸವಲತ್ತು ವಿತರಿಸುವ ವಿವಿಧ ಯೋಜನೆಗಳಿಗೆ ಆನ್‌ಲೈನ್ ಮೂಲಕ ಭಾರಿ ಪ್ರಮಾಣದಲ್ಲಿ ಅರ್ಜಿ ಸ್ವೀಕೃತವಾಗಿದೆ. ಹೀಗಾಗಿ, ಮುಂದಿನ ವರ್ಷ ಹೆಚ್ಚಿನ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.
ವಸತಿ ಇಲಾಖೆ ವಿವಿಧ ವಸತಿ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿಗೆ ಎದುರಾಗಿ ಈವರೆಗೆ 1.31 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಮುಕ್ತಾಯದ ಹಂತದಲ್ಲಿರುವ 1.6 ಲಕ್ಷ ಮನೆಗಳನ್ನು ಮಾರ್ಚ್‌ನೊಳಗೆ ಪೂರ್ಣಗೊಳಿಸುವಂತೆಯೂ ಸಿಎಂ ನಿರ್ದೇಶನ ನೀಡಿದರು.
ಇದನ್ನೂಓದಿ: ಕನ್ನಡ ಹೋರಾಟಗಾರರ ಬಂಧನ ಬೇಸರ ತರಿಸಿದೆ: ಬೊಮ್ಮಾಯಿ