ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೂಡಿ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು , ಸಚಿವ ಗೋವಿಂದ ಕಾರಜೋಳ ಭಾನುವಾರ ಬೆಂಗಳೂರಿನ ಗಾಂಧಿ ಭವನದ ಬಳಿ ಇರುವ ಖಾದಿ ಎಂಪೋರಿಯಂನಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸಿದರು.
ಸಂಕಷ್ಟದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘ-ಸಂಸ್ಥೆಗಳಿಗೆ ಆರ್ಥಿಕ ಬಲ ನೀಡುವ ದೃಷ್ಟಿಯಿಂದ ಸಿಎಂ ಭೇಟಿ ನೀಡಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ, ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಶಾಸಕರುಗಳಿಗೆ ಎಂಟಿಬಿ ನಾಗರಾಜು ಪತ್ರ ಬರೆದಿದ್ದರು. ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಅವರು ಸ್ವತಃ ತಾವೇ ಅದಕ್ಕೆ ಮೇಲ್ಪಂಕ್ತಿ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರುಗಳನ್ನು ಕರೆದೊಯ್ದು, ಖಾದಿ ಉತ್ಪನ್ನಗಳನ್ನು ಖರೀದಿಸಿದರು.
ಈ ಮಳಿಗೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ, ಅವರು (ಅಂದಿನ ಹಣಕಾಸು ಸಚಿವರು) 15.11.1984ರಲ್ಲಿ ಉದ್ಘಾಟಿಸಿದ್ದರು.
ಫೋಟೋಗೆ ಫೋಸ್ ನೀಡಿ ಬಟ್ಟೆ ಖರೀದಿಸಿದ ಸಿಎಂ: ಗ್ರಾಹಕರೊಬ್ಬರ ಜೊತೆ ಫೋಟೋಗೆ ಪೋಸ್ ನೀಡಿದ ಸಿಎಂ ಡಜನ್ ಕರವಸ್ತ್ರ ಹಾಗೂ ಎರಡು ಪ್ಯಾಂಟ್, ಆರು ಶರ್ಟ್, ನಾಲ್ಕು ಬನಿಯನ್, ಎರಡು ಜುಬ್ಬಾಗಳನ್ನ ಖರೀದಿಸಿದರು.
ಸಿಎಂ ಖರೀದಿಸಿದ ಬಟ್ಟೆಯ ವಿವರ:
ಲೇಡಿಸ್ ಟಾಪ್ ಡ್ರೆಸ್ - 1
ರೆಡಿಮೇಡ್ ಫುಲ್ ಶರ್ಟ್ - 1
ರೆಡಿಮೇಡ್ ಟೀ ಶರ್ಟ್ - 1
ಜುಬ್ಬಾ -3 ಸೇರಿದಂತೆ 8 ವಿವಿಧ ಬಟ್ಟೆಗಳನ್ನು ಸಿಎಂ ಖರೀದಿ ಮಾಡಿದ್ದು, ಖಾದಿ ಭಂಡಾರದಲ್ಲಿ ಒಟ್ಟು 3,329 ರೂಪಾಯಿ ಬೆಲೆಯ ಖಾದಿ ಬಟ್ಟೆ ಖರೀದಿ ಮಾಡಿದರು.