ಬೆಂಗಳೂರು: ನಟ ಸುದೀಪ್ ಬಿಜೆಪಿ ಸೇರ್ಪಡೆ ಕುರಿತ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿರುವುದು ನಿಜ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಗುಟ್ಟುಬಿಟ್ಟುಕೊಡದೇ ಹಾರಿಕೆಯ ಉತ್ತರ ನೀಡಿದರು. ಪಕ್ಷದಲ್ಲಿ ಚರ್ಚೆಯಾಗುತ್ತಿರುವುದು ನಿಜ, ಕೇವಲ ಚರ್ಚೆಯಾಗುತ್ತಿದೆ ಅಷ್ಟೆ. ಹೆಚ್ಚಿನ ವಿಷಯಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸುತ್ತೇನೆ ಎಂದು ಸುದೀಪ್ ವಿಷಯದ ಚರ್ಚೆಗೆ ತೆರೆ ಎಳೆದರು.
ಐಟಿ, ಇಡಿ ಮೂಲಕ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಪ್ರೋಟೋಕಾಲ್ ಪ್ರಕಾರ ಎಲ್ಲ ನಡೆಯುತ್ತಿದೆ. ಒಂದು ವಾರದಿಂದಲ್ಲೇ ಎಲ್ಲ ಅಧಿಕಾರಿಗಳು ಬಂದಿದ್ದಾರೆ. ಇವರಿಗೇಕೆ ಭಯ. 60 ವರ್ಷದಿಂದ ದುಡ್ಡು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಗಿಲ್ಟಿ ಫೀಲ್ ಆಗುತ್ತಿದೆ ಎಂದರು ಚಾಟಿ ಬೀಸಿದರು.
ಸಿಎಂ ಅವರಿಂದ ಎರಡು ಸುದ್ದಿಗೋಷ್ಠಿ: ನಟ ಸುದೀಪ್ ಬಿಜೆಪಿ ಸೇರ್ಪಡೆ ಸುದ್ದಿ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ಸುದ್ದಿಗೋಷ್ಠಿಗಳನ್ನು ಕರೆದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಇಂದು ಮಧ್ಯಾಹ್ನ 1.30ಕ್ಕೆ ಕುಮಾರಪಾರ್ಕ್ ನಲ್ಲಿರುವ ಅಶೋಕ ಹೋಟೆಲ್ನಲ್ಲಿ ಮೊದಲ ಸುದ್ದಿಗೋಷ್ಠಿ ಕರೆದಿರುವ ಸಿಎಂ ಬೊಮ್ಮಾಯಿ, 2.30ಕ್ಕೆ ಕ್ಯಾಪಿಟಲ್ ಹೋಟೆಲ್ನಲ್ಲಿ ಎರಡನೇ ಸುದ್ದಿಗೋಷ್ಠಿ ಕರೆದಿದ್ದಾರೆ. ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ಎರಡು ಸುದ್ದಿಗೋಷ್ಠಿ ಕರೆದಿರುವುದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ಪಕ್ಷಕ್ಕೆ ನಟ ಸುದೀಪ್ ಬಂದರೆ ಸ್ವಾಗತ ಮಾಡುತ್ತೇವೆ: ನಟ ಸುದೀಪ್ ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇನೆ. ಅವರು ಬಿಜೆಪಿಗೆ ಬಂದರೆ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಅವರು ಪಕ್ಷ ಸೇರುತ್ತಾರೆ ಎನ್ನುವ ವಿಷಯದ ಕುರಿತು ಮಾಹಿತಿ ಇಲ್ಲ ಎಂದು ವಾಲ್ಮೀಕಿ ಸಮುದಾಯದ ನಾಯಕರೂ ಆಗಿರುವ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಸುದೀಪ್ ಬಿಜೆಪಿ ಸೇರ್ಪಡೆ ಸಾಧ್ಯತೆ ವಿಚಾರ ಇದು ಯಾವುದು ಕೂಡಾ ನನ್ನ ಗಮನಕ್ಕೆ ಬಂದಿಲ್ಲ. ಸುದೀಪ್ ಬಹಳ ದೊಡ್ಡ ಕಲಾವಿದ, ಹಿರಿಯ ಕಲಾವಿದ, ಜನಪ್ರಿಯ ನಾಯಕ ಮತ್ತು ಜನಪ್ರಿಯ ನಟರಾಗಿದ್ದಾರೆ.
ಅವರು ಬರುವುದರಿಂದ ಬಿಜೆಪಿಗೆ ಅನುಕೂಲ ಆಗುತ್ತದೆ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ ಎಂದರು. ನಟ ಸುದೀಪ್ ಕೂಡ ತಮ್ಮ ಸಮುದಾಯಕ್ಕೆ ಸೇರಿದ ವ್ಯಕ್ತಿ ಅವರು ನಮ್ಮ ಸಮುದಾಯದ ನಾಯಕ ಅಂತಾ ಏನೂ ಸಮಸ್ಯೆ ಇಲ್ಲ, ನನಗೆ ಪಕ್ಷ ಮುಖ್ಯ, ಸುದೀಪ್ ಬಿಜೆಪಿ ಸೇರ್ಪಡೆಗೆ ನನ್ನ ಆಕ್ಷೇಪಣೆ ಏನೂ ಇಲ್ಲ, ಅವರು ಬಂದರೆ ಸ್ವಾಗತ ಮಾಡುತ್ತೇನೆ ಎಂದು ರಾಮುಲು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕಿಚ್ಚ ಇಂದು ರಾಜಕೀಯ ಎಂಟ್ರಿ ವಿಚಾರ: ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಸಾಧ್ಯತೆ?