ಬೆಳಗಾವಿ/ಬೆಂಗಳೂರು: ಸರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆಯ ಕುರಿತು ಸದನದಲ್ಲಿ ಚರ್ಚೆ ನಡೆಸಿ ನಂತರ ಈ ಬಗ್ಗೆ ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಇಂದು ಜೆಡಿಎಸ್ ಶಾಸಕ ಲಿಂಗೇಶ್ ಅವರು ವಿಷಯ ಪ್ರಸ್ತಾಪಿಸಿ ನೂತನ ಪಿಂಚಣಿ ಯೋಜನೆ (ಎನ್ ಪಿಎಸ್) ತೆಗೆದು ಹಾಕುವಂತೆ ನೌಕರರು ಹೋರಾಟ ನಡೆಸುತ್ತಿದ್ದಾರೆ. ಇದನ್ನು ರದ್ದು ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ದನಿಗೂಡಿಸಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಎನ್ಪಿಎಸ್ ವಿಚಾರವನ್ನು ಪ್ರಸ್ತಾಪಿಸಲು ಸದನದಲ್ಲಿ ಎಲ್ಲ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ. ಎನ್ಪಿಎಸ್ ಗಂಭೀರ ವಿಚಾರವಾಗಿದೆ. ಇಡೀ ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತದೆ. ಸದನದ ಒಪ್ಪಿಗೆ ಪಡೆದೇ ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡಬೇಕೆಂಬುದನ್ನು ತೀರ್ಮಾನಿಸಲಾಗುವುದು. ಸರ್ಕಾರಿ ನೌಕರರಿಗೆ ಹತ್ತು ಹಲವು ಸವಲತ್ತುಗಳನ್ನು ನೀಡಲಾಗಿದೆ.
ಟಿಎ, ಡಿಎಗಳನ್ನು ಸಕಾಲಿಕವಾಗಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಡಿಎ ಪ್ರಕಟಿಸಿದ 24 ಗಂಟೆಗಳಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಡಿಎ ಸಿಗುವ ವ್ಯವಸ್ಥೆ ಚಾಲನೆಯಲ್ಲಿದೆ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ರಚನೆ ಮಾಡಿದ್ದೇವೆ ಎಂದರು. ಈ ಕುರಿತು ಸಾಧಕ-ಬಾಧಕಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ. ಸರ್ಕಾರ ಏಕಪಕ್ಷೀಯ ತೀರ್ಮಾನ ಮಾಡುವುದು ಬೇಡ ಎಂಬುದು ನನ್ನ ನಿಲುವು. ಬೊಕ್ಕಸವನ್ನು ನಿಭಾಯಿಸಲು ಅಭಿವೃದ್ಧಿ ಕಾರ್ಯಗಳ ವಿಚಾರ, ನೌಕರರ ಹಿತಾಸಕ್ತಿ ಎಲ್ಲದರ ಬಗ್ಗೆಯೂ ಚರ್ಚೆಯಾಗಲಿ. ಸರ್ಕಾರ ಸುದೀರ್ಘ ಉತ್ತರ ನೀಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಅಲ್ಪಸಂಖ್ಯಾತರ ವಿವಿಧ ಯೋಜನೆಗಳಿಗೆ ಹಣ ಮಂಜೂರು ಮಾಡುತ್ತೇವೆ: ಸಿಎಂ ಭರವಸೆ