ಬೆಂಗಳೂರು: ಆರು ಜಿಲ್ಲೆಗಳ ಶಾಸಕರು ಹಾಗೂ ಉಸ್ತುವಾರಿ ಸಚಿವರ ಜೊತೆಗೆ ಸಿಎಂ ಸಿದ್ದರಾಮಯ್ಯ ಇಂದು ಸರಣಿ ಸಭೆ ನಡೆಸಿದರು. ಸಭೆಯಲ್ಲಿ ಬಹುತೇಕ ಶಾಸಕರು ಅನುದಾನ ಬಿಡುಗಡೆ ಬಗ್ಗೆ ಅಳಲು ತೋಡಿಕೊಂಡರು.
ಬೆಳಗ್ಗೆ ರಾಯಚೂರು, ವಿಜಯಪುರ ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ಜೊತೆ ಸಿಎಂ ಮಾತನಾಡಿದರು. ಸಂಜೆ ಬೆಳಗಾವಿ, ಹಾವೇರಿ ಮತ್ತು ಕಲಬುರಗಿ ಜಿಲ್ಲೆಗಳ ಶಾಸಕರು ಹಾಗೂ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಅಸಮಾಧಾನಕ್ಕೆ ಮದ್ದು ಅರೆಯುವ ಕಸರತ್ತು ನಡೆಸಿದರು.
ಆರು ಜಿಲ್ಲೆಯ ಸಚಿವರು ಮತ್ತು ಶಾಸಕರುಗಳು ಆಯಾ ಕ್ಷೇತ್ರಗಳ ಅಭಿವೃದ್ಧಿ, ಅನುದಾನ ಮತ್ತು ಲೋಕಸಭಾ ಚುನಾವಣೆ ಸಿದ್ದತೆ ಕುರಿತು ಚರ್ಚಿಸಿದರು. ಸಚಿವರ ಜೊತೆ ಸಮನ್ವಯತೆ, ಪಂಚ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನ ಸಂಬಂಧ ಸುದೀರ್ಘವಾಗಿ ಚರ್ಚಿಸಿದ್ದಾರೆ.
'ಲೋಕಸಭೆ ಚುನಾವಣೆಗೆ ಎದುರಿಸುವುದು ಹೇಗೆ?': ಸಭೆಯಲ್ಲಿ ಸಿಎಂ ಬಳಿ ಹೆಚ್ಚು ಶಾಸಕರು ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡದೇ ಲೋಕಸಭೆ ಚುನಾವಣೆಗೆ ಹೋಗೋದು ಹೇಗೆ ಎಂಬ ಆತಂಕ, ದುಗುಡವನ್ನು ಮುಖ್ಯಮಂತ್ರಿ ಮುಂದಿಟ್ಟಿದ್ದಾರೆ. ಗ್ಯಾರಂಟಿ ಸ್ಕೀಂ ಒಂದೆಡೆಯಾದ್ರೆ, ಕ್ಷೇತ್ರಕ್ಕೆ ಏನು ಕೊಟ್ಟಿದ್ದೀರಿ ಎಂದು ಜನ ಕೇಳ್ತಾರೆ. ಅದಕ್ಕೆ ಹೇಗೆ ಉತ್ತರಿಸುವುದು?. ಹೀಗಾಗಿ ವಿಶೇಷ ಅನುದಾನ ಕೊಡಬೇಕೆಂದು ಶಾಸಕರು ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಜನರ ಬಳಿ ಹೋದಾಗ ಇಷ್ಟು ಅನುದಾನ ತಂದು, ಕಾಮಗಾರಿ ಮಾಡಿಸುತ್ತಿದ್ದೇವೆ ಎಂದು ಹೇಳಬೇಕಾಗುತ್ತದೆ. ಅನುದಾನವೇ ಕೊಡದಿದ್ದರೆ ಮತ ಕೇಳೋದು ಕಷ್ಟವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಪರಿಷತ್ ಸದಸ್ಯ ಪ್ರಕಾಶ ರಾಥೋಡ್, ಜಿಲ್ಲೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಆಯಿತು. ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು, ಅದಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಶಾಲಾ ಕಟ್ಟಡಗಳನ್ನು ಸರಿಪಡಿಸುವುದಕ್ಕೆ ಹಣ ಬಿಡುಗಡೆ ಮಾಡುವುವಂತೆ ಹೇಳಿದ್ದೇವೆ. ಕೃಷ್ಣಾ ಮೇಲ್ದಂಡೆ ಆಲಮಟ್ಟಿ ಜಲಾಶಯದ ತೀರ್ಪಿನ ಅಡಚಣೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಹೇಳಿದ್ದೇವೆ ಎಂದರು.
ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಆಲಮಟ್ಟಿ ಅಣೆಕಟ್ಟನ್ನು ಸಂಪೂರ್ಣ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಬೇಕು. ಜಿಲ್ಲಾ ಮಂತ್ರಿಗಳ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಸಿದ್ದತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಗೆ ಹೋಗಬೇಕೆಂದು ಸಿಎಂ ತಿಳಿಸಿದ್ದಾರೆ ಎಂದು ತಿಳಿಸಿದರು.
ನಾಳೆಯೂ ಉಳಿದ ಆರು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಿಎಂ ಸರಣಿ ಸಭೆ ನಡೆಸಲಿದ್ದಾರೆ.