ಬೆಂಗಳೂರು: ಲಾಕ್ ಡೌನ್ ಜಾರಿಯಾದ ನಂತರದ ಸ್ಥಿತಿಗತಿಗಳ ಕುರಿತು 8 ವಲಯಗಳ ಉಸ್ತುವಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿಗಳು ಭಾಗಿಯಾಗಿದ್ದು, ತಮ್ಮ ತಮ್ಮ ವಲಯಗಳಲ್ಲಿನ ಪರಿಸ್ಥಿತಿ ಬಗ್ಗೆ ಸಿಎಂಗೆ ಮಾಹಿತಿ ನೀಡುತ್ತಿದ್ದಾರೆ.
ಮೊದಲು ವಲಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆಯಲಿರುವ ಸಿಎಂ, ನಂತರ ಕ್ರಮಗಳ ಜೊತೆಗೆ ಮತ್ತಷ್ಟು ಹೆಚ್ಚುವರಿ ಕ್ರಮಗಳ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಲಾಕ್ ಡೌನ್ ನಿಂದ ಆಗುತ್ತಿರುವ ಲಾಭ ನಷ್ಟದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಲಾಕ್ ಡೌನ್ನಿಂದ ಕೊರೊನಾ ಹರಡುವಿಕೆ ಎಷ್ಟು ಕಡಿಮೆಯಾಗಿದೆ, ವಾರ್ಡ್ ಗಳಲ್ಲಿ ಕೊರೊನಾ ಪರೀಕ್ಷೆ ಯಾವ ರೀತಿ ನಡೆಯುತ್ತಿದೆ, ಪಾಲಿಕೆ ಸದಸ್ಯರು, ಸ್ವಯಂಸೇವಕರ ಕೆಲಸ ಎಂಬಿತ್ಯಾದಿ ವಿಷಯಗಳ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ.
ಸೀಲ್ ಡೌನ್ ಆಗಿರುವ ಏರಿಯಾಗಳಲ್ಲಿ ಕೊರೊನಾ ಕಡಿಮೆಯಾಗಿದೆಯಾ ಎಂಬುದರ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ಸಿಎಂ ಮಾಹಿತಿ ಪಡೆಯುತ್ತಿದ್ದಾರೆ.
ಚರ್ಚೆ ನಂತರ ಮತ್ತೆ ಒಂದು ವಾರದ ಲಾಕ್ ಡೌನ್ ವಿಸ್ತರಣೆ ಮಾಡುವ ಬಗ್ಗೆಯೂ ಇಂದು ಸಮಾಲೋಚನೆ ನಡೆಯಲಿದೆ ಎನ್ನಲಾಗ್ತಿದೆ. ಒಂದು ವಾರದ ಲಾಕ್ ಡೌನ್ ಸಾಕಾ ಅಥವಾ ವಿಸ್ತರಣೆ ಮಾಡಬೇಕಾ ಎಂಬುದರ ಬಗ್ಗೆ ಸಚಿವರಿಂದ ಸಿಎಂ ಅಭಿಪ್ರಾಯ ಪಡೆಯಲಿದ್ದಾರೆ.