ಬೆಂಗಳೂರು: ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಮಾಜಿಕ ಜಾಲತಾಣದ ಮೂಲಕ ಲೈವ್ನಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಇಂದು ಮಾತನಾಡಲಿದ್ದಾರೆ.
ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫೇಸ್ಬುಕ್ ಹಾಗೂ ಟ್ವಿಟರ್, ಯೂಟ್ಯೂಬ್ನಲ್ಲಿ ಲೈವ್ ಬರುತ್ತಿದ್ದು, ರಾಜ್ಯದ ಜನರಿಗೆ ಸಂದೇಶ ನೀಡಲಿದ್ದಾರೆ. ಬೆಂಗಳೂರಿನ ಲಾಕ್ಡೌನ್ ಇಂದು ಕೊನೆಗೊಳ್ಳುತ್ತಿದ್ದು, ನಾಳೆ ಬೆಳಗ್ಗೆ 5 ಗಂಟೆಯಿಂದ ಅನ್ಲಾಕ್ ಆಗಲಿದೆ. ಈ ಅನ್ಲಾಕ್ ಯಾವ ರೀತಿ ಇರಲಿದೆ. ಇದರ ಮಾರ್ಗಸೂಚಿ ಏನು? ಯಾವೆಲ್ಲಾ ನಿಯಮ ಹೊಸದಾಗಿ ಹಾಕಲಾಗುತ್ತಿದೆ ಎನ್ನುವುದು ಸೇರಿದಂತೆ ಸಮಗ್ರವಾದ ವಿವರವನ್ನು ಫೇಸ್ಬುಕ್, ಟ್ವಿಟರ್ , ಯೂಟ್ಯೂಬ್ ಲೈವ್ ಮುಖಾಂತರ ಜನರಿಗೆ ಮಾಹಿತಿ ನೀಡಲಿದ್ದಾರೆ.
ಇನ್ನು ಕೊರೊನಾ ನಂತರದಲ್ಲಿ ನಡೆದಿರುವ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಆರೋಪವನ್ನು ಪ್ರತಿಪಕ್ಷ ಕಾಂಗ್ರೆಸ್ ಮಾಡಿದ್ದು, ಈಗಾಗಲೇ ಡಿಸಿಎಂ ಅಶ್ವತ್ಥನಾರಾಯಣ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಜಂಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದರೂ ಕೂಡ ಸ್ವತಃ ಸಿಎಂ ಈ ಬಗ್ಗೆ ವಿವರಗಳನ್ನು ಅಂಕಿ ಅಂಶಗಳನ್ನು ಲೈವ್ ಮುಖಾಂತರ ಜನರ ಮುಂದಿಡುವ ಸಾಧ್ಯತೆ ಇದೆ. ಇಷ್ಟು ದಿನ ಯಾವುದೇ ಮಹತ್ವದ ಪ್ರಕಟಣೆ ಹೊರಡಿಸುವುದಿದ್ದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕಟಣೆ ಹೊರಡಿಸುತ್ತಿದ್ದರು. ಪ್ರಮುಖ ನಿರ್ಧಾರದ ಘೋಷಣೆಗೂ ಸಿಎಂ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡುತ್ತಿದ್ದರು. ಆದರೆ, ಇದೇ ಮೊದಲ ಬಾರಿ ಸೋಷಿಯಲ್ ಮೀಡಿಯಾ ಲೈವ್ ಮೂಲಕ ರಾಜ್ಯದ ಜನರಿಗೆ ಸಂದೇಶ ನೀಡಲು ಹೊರಟಿದ್ದಾರೆ.