ಬೆಂಗಳೂರು: ಚಳಿಗಾಲದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಯ ಹಿನ್ನೆಲೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಚಳಿಗಾಲದಲ್ಲಿ ಸೋಂಕು ಹೆಚ್ಚಳವಾಗುವ ಹಿನ್ನೆಲೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಪತ್ರದಲ್ಲಿ ನಾಗರಿಕರ ಮನಸ್ಸಿನಲ್ಲಿ ಕೋವಿಡ್ ಕುರಿತಾದ ಭಯವನ್ನು ಸ್ಥಳೀಯ ಧಾರ್ಮಿಕ ಗುರುಗಳ ವತಿಯಿಂದ ನಿವಾರಣೆ ಮಾಡುವ ಪ್ರಸ್ತಾಪ ಕೂಡ ಮಾಡಿದ್ದಾರೆ.
ಕೋವಿಡ್ ನಿಯಂತ್ರಿಸಲು ಅನುಸರಿಸಬೇಕಾದ ಕ್ರಮಗಳು:
1. ಗ್ರಾಮಮಟ್ಟ ಹಾಗೂ ನಗರ ಪ್ರದೇಶಗಳಲ್ಲಿನ ಬೂತ್ ಮಟ್ಟದ ಸಮಿತಿಗಳನ್ನು ಕ್ರಿಯಾಶೀಲಗೊಳಿಸಿ ಅವುಗಳ ಕಾರ್ಯಗಳನ್ನು ಪರಾಮರ್ಶಿಸುವುದು.
2. ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡುವಂತೆ ಕ್ರಮ ವಹಿಸುವುದು.
3. Co-Morbidityಯುಳ್ಳ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ನಿರಂತರ ನಿಗಾ ವಹಿಸುವುದು.
4. Home Isolation / Home Quarantineನಲ್ಲಿರುವವರ ಆರೋಗ್ಯದ ಬಗ್ಗೆ ನಿಗಾ ವಹಿಸುವುದು.
5. ಐಸಿಯುನಲ್ಲಿರುವಂತಹ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ತಜ್ಞರೊಂದಿಗೆ ಟೆಲಿ ಐಸಿಯು ವ್ಯವಸ್ಥೆಯನ್ನು ಬಳಸಿ ಐಸಿಯುನಲ್ಲಿ ದಾಖಲಾದ ರೋಗಿಗಳು ಗುಣಮುಖರಾಗುವಂತೆ ಚಿಕಿತ್ಸೆ ನೀಡಿ ಹೆಚ್ಚು ಸಾವು ಸಂಭವಿಸದಂತೆ ನೋಡಿಕೊಳ್ಳುವುದು.
6. ಪ್ರತಿ ಸಾವಿಗೆ ಸಂಬಂಧಿಸಿದಂತೆ ವೈದ್ಯರು ಡೆತ್ ಆಡಿಟ್ ವರದಿಯನ್ನು 24 ಗಂಟೆಗಳ ಒಳಗಾಗಿ ಸಲ್ಲಿಸುವುದು.
7. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸುವುದು.
8. ಮಾಸ್ಕ್ ಧರಿಸದವರಿಗೆ ನಗರ ಪ್ರದೇಶಗಳಲ್ಲಿ ರೂ. 250 ಹಾಗೂ ಗ್ರಾಮೀಣ ಪ್ರದೇಶದಲ್ಲಿ ರೂ. 100 ದಂಡ ವಿಧಿಸುವ ಕುರಿತು ತಿಳುವಳಿಕೆ ಮೂಡಿಸುವುದು.
9. ಪೊಲೀಸ್ ಇಲಾಖೆಯಿಂದ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸುವುದು.
10. ನಾಗರಿಕರ ಮನಸ್ಸಿನಲ್ಲಿ ಕೋವಿಡ್ ಕುರಿತಾದ ಭಯವನ್ನು ಸ್ಥಳೀಯ ಧಾರ್ಮಿಕ ಗುರುಗಳ ವತಿಯಿಂದ ನಿವಾರಣೆ ಮಾಡುವುದು.