ಬೆಂಗಳೂರು: ನಾಳೆ ನಡೆಯುವ ಅಧಿವೇಶನದಲ್ಲಿ ಏನೆಲ್ಲಾ ತಂತ್ರಗಳನ್ನು ಮಾಡಬಹುದು ಅನ್ನೋದರ ಕುರಿತು ಜೆಡಿಎಸ್ ಶಾಸಕರ ಸಭೆಯಲ್ಲಿ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಏನೇ ಆದ್ರೂ ಕೊನೆಯವರೆಗೂ ಹೋರಾಟ ಮಾಡುವುದರ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಜೆಡಿಎಸ್ ಶಾಸಕರ ಸಭೆಗೆ ಸಿಎಂ ಆಗಮನ ನಾಳೆ ವಿಧಾನಸೌಧದಲ್ಲಿ ಬಹುಮತ ಸಾಬೀತು ಪಡಿಸುವುದರ ಬಗ್ಗೆ ಶಾಸಕರ ಜೊತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಸದನದಲ್ಲಿ ಬಹುಮತ ಸಾಬೀತುಪಡಿಸುವ ಅನಿವಾರ್ಯ ಎದುರಾದರೆ ಎಲ್ಲಾ ಶಾಸಕರು ಪಕ್ಷದ ಪರವಾಗಿ ಮತ ಚಲಾಯಿಸಬೇಕು. ಒಂದೊಮ್ಮೆ ಚಲಾಯಿಸದಿದ್ದರೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.ಇದರ ಜೊತೆಯಲ್ಲಿ ಮೈತ್ರಿ ಸರ್ಕಾರ ಈ ಸ್ಥಿತಿಗೆ ಬರಲು ಏನು ಕಾರಣ.? ಶಾಸಕರು ರಾಜೀನಾಮೆಯನ್ನು ಏಕೆ ನೀಡಿದ್ದಾರೆ. ಅವರಿಗೆ ಸರ್ಕಾರದಿಂದ ಏನು ಆಗಬೇಕು. ಒಂದು ವೇಳೆ ಅವರ ಬೇಡಿಕೆ ಏನು.? ಅನ್ನೋದರ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅತೃಪ್ತರು ಒಂದು ವೇಳೆ ಸಿಎಂ ಬದಲಾವಣೆ ಮಾಡಬೇಕು ಎಂದಾಗ ಏನು ಮಾಡಬೇಕು ಹಾಗೂ ಅತೃಪ್ತ ಶಾಸಕರಿಗೆ ಸಚಿವ ಸ್ಥಾನದ ಬೇಡಿಕೆ ಇಟ್ಟರೆ ಅವರಿಗೆ ಸಚಿವ ಸ್ಥಾನ ನೀಡುವುದರ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಅಲ್ಲದೇ ಅತೃಪ್ತರನ್ನು ಮರಳಿ ಕರೆಸಿಕೊಳ್ಳಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದರ ಕುರಿತು ಚರ್ಚೆ ನಡೆದಿದೆ. ಕಳೆದ ನಾಲ್ಕೈದು ದಿನದಿಂದ ಬಿಜೆಪಿ ವಿಶ್ವಾಸಮತಯಾಚನೆಗೆ ಪಟ್ಟು ಹಿಡಿಯುತ್ತಿದೆ. ನಾಳೆಯೂ ಅದೇ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲಿದ್ದು, ಈ ವೇಳೆ ಸರ್ಕಾರವನ್ನು ಉಳಿಸಿಕೊಳ್ಳಲು ಏನೆಲ್ಲಾ ತಂತ್ರಗಳನ್ನು ಮಾಡಬೇಕು. ವಿಶ್ವಾಸಮತಯಾಚನೆಯನ್ನು ಮುಂದೂಡಲು ಚರ್ಚೆಯನ್ನು ದಿನಪೂರ್ತಿ ಮಾಡುವುದರ ಜೊತೆಯಲ್ಲಿ ಬಿಜೆಪಿಯವರಿಗೆ ಕೋಪ ತರಿಸುವಂತೆ ಮಾತನಾಡುವವರು ಯಾರು ಅನ್ನೋದರ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ. ನಾಳೆ ಬೆಳಗ್ಗೆ ಗಾಲ್ಪ್ ಶೈರ್ ರೆಸಾರ್ಟ್ ನಿಂದ ನೇರವಾಗಿ ಬಸ್ಸಿನಲ್ಲಿ ವಿಧಾನಸಭೆ ಅಧಿವೇಶನಕ್ಕೆ ಜೆಡಿಎಸ್ ಶಾಸಕರು ತೆರಳಲಿದ್ದಾರೆ.