ಬೆಂಗಳೂರು: ವಡೇರಹಳ್ಳಿ ಗ್ರಾಮದ ಉತ್ತರಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ 'ಬಿ' ರಿಪೋರ್ಟ್ ರದ್ದುಗೊಳಿಸಿ ಎಂದು ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ. ಡಿ ಹುದ್ದಾರ ಇಂದು ಆದೇಶ ಹೊರಡಿಸಿದ್ದಾರೆ.
ಬನಶಂಕರಿ ಬಳಿ ಇರುವ ಉತ್ತರಹಳ್ಳಿ ಹೋಬಳಿಯ ಹಲಗೆ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 128, 130 ರಲ್ಲಿ ಸುಮಾರು 2.24 ಎಕರೆ ಭೂಮಿಯನ್ನ ಕೋಟಿ ಕೋಟಿ ಹಣಕ್ಕೆ ಸಿಎಂ ಖಾಸಗಿಯವರಿಗೆ ಡಿನೊಟಿಫಿಕೇಷನ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮಹಾದೇವಸ್ವಾಮಿ ಎಂಬುವವರು 2012ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ಈ ಬಗ್ಗೆ 2018ರಲ್ಲಿ 'ಬಿ' ರಿಪೋರ್ಟ್ ಸಲ್ಲಿಸಿತ್ತು.
ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಲೋಕಾಯುಕ್ತ ಪೊಲೀಸರ ಮೇಲೆ ಒತ್ತಡ ಹಾಕಿ ಬಿ ರಿಪೋರ್ಟ್ ಹಾಕಿಸಿದ್ದಾರೆ ಎಂದು ಮಹಾದೇವಸ್ವಾಮಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆ ಮಾಡಿದ್ದರು. ಅದರಂತೆ ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಇಂದು ಲೋಕಾಯುಕ್ತ 'ಬಿ' ರಿಪೋರ್ಟ್ ರದ್ದು ಮಾಡಿದೆ. ಮರು ತನಿಖೆ ನಡೆಸಿ ಮಾಹಿತಿ ನೀಡಿ ಎಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿ ಜು.26 ಕ್ಕೆ ಪ್ರಕರಣದ ವಿಚಾರಣೆಯನ್ನ ಕೋರ್ಟ್ ಮುಂದೂಡಿಕೆದೆ.