ಬೆಂಗಳೂರು : ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಅನುಕೂಲವಾಗುವಂತೆ ಕಾನೂನು ಸಲಹೆಗಾರರನ್ನು ಬೆಂಗಳೂರಿನಲ್ಲಿರುವ ಕೇಂದ್ರ ಕಾನೂನು ಕೋಶದಿಂದ ಬಾಲಕೋಟೆಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೇಮಿಸಿ ಕಾನೂನು ಕೋಶವನ್ನು ಬಲಯುತಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಮತ್ತು ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಈಗ ಮುಳುಗಡೆಯಾಗುವ 20 ಗ್ರಾಮಗಳನ್ನು ಸ್ಥಳಾಂತರಿಸಲು ತೀರ್ಮಾನಿಸಿದ್ದು, ಅದಕ್ಕೆ ಬೇಕಾಗುವ ಪುನರ್ ವಸತಿ ಕೇಂದ್ರ ಹಾಗೂ ಮೂಲಸೌಕರ್ಯಕ್ಕೆ ಅಗತ್ಯವಿರುವ ಅನುದಾನವನ್ನು ಪೂರೈಸಲು ಸರ್ಕಾರ ತೀರ್ಮಾನಿಸಿದೆ.
20 ಗ್ರಾಮಗಳ ಕಟ್ಟಡಗಳನ್ನು ಹಾಗೂ ಆ ಗ್ರಾಮಗಳಿಗೆ ಸಂಬಂಧಿಸಿದಂತೆ ಮುಳುಗಡೆ ಜಮೀನು ಕೂಡ ಸ್ವಾಧೀನಪಡಿಸಿಕೊಂಡು ಪ್ರಸ್ತುತ ಸಾಲಿನಲ್ಲಿ 2,500 ಕೋಟಿ ಹೆಚ್ಚುವರಿ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.
ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಅನುಕೂಲವಾಗುವಂತೆ ಕಾನೂನು ಸಲಹೆಗಾರರನ್ನು ಬೆಂಗಳೂರಿನಲ್ಲಿರುವ ಕೇಂದ್ರ ಕಾನೂನು ಕೋಶದಿಂದ ಬಾಲಕೋಟೆಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೇಮಿಸಿ ಕಾನೂನು ಕೋಶವನ್ನು ಬಲಗೊಳಿಸಲು ತೀರ್ಮಾನಿಸಲಾಯಿತು.
ಅದೇ ರೀತಿ ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಚಾರಣೆ ಹಂತದಲ್ಲಿರುವ ಭೂಸ್ವಾಧೀನ ಮೇಲ್ಮನವಿ ಪ್ರಕರಣಗಳಲ್ಲಿ ವಾದಿಸಲು ವಿಶೇಷ ಸರ್ಕಾರಿ ವಕೀಲರನ್ನು ನೇಮಿಸಲು, ಖಾಲಿ ಹುದ್ದೆಗಳನ್ನು ಆದ್ಯತೆಯ ಮೇಲೆ ಭರ್ತಿ ಮಾಡಲು ತೀರ್ಮಾನಿಸಲಾಯಿತು.
ಕೆಬಿಜೆಎನ್ ಎಲ್ ಕಚೇರಿಯನ್ನು ಆಲಮಟ್ಟಿಗೆ ವರ್ಗಾಯಿಸಲು ಹಾಗೂ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ಹೆಚ್ಚುವರಿ ಸಿಬ್ಬಂದಿ ಒದಗಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದರು. ಡ್ರೋಣ್ ಸರ್ವೇ ಮತ್ತು ಸರ್ವೇಯರುಗಳನ್ನು ಬಳಸಿ ಸರ್ವೇ ಮಾಡಲು ಸೂಚಿಸಿದರು. ಕೃಷ್ಣಾ ಮೇಲ್ದಂಡೆ ಹಂತ 1 ಮತ್ತು 2ರಡಿ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದ್ದರೂ, ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ.
ರೈತರ ಜಮೀನುಗಳಿಗೆ ನೀರು ಹರಿಯಬೇಕು. ಇದಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು. ಹಂತ ಮೂರರಲ್ಲಿ 9 ಯೋಜನೆಗಳ ಅನುಷ್ಠಾನದ ಮೂಲಕ 5.94 ಹೆಕ್ಟೇರ್ ಜಮೀನಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಗೆ ನೀಡಿ ಇದಕ್ಕೆ ಪೂರಕವಾಗಿ ಇರುವ ಕಾಮಗಾರಿ ಆರಂಭಕ್ಕೆ ನಿರ್ದೇಶನ ನೀಡಲಾಯಿತು.