ಬೆಂಗಳೂರು: ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಆದರೆ, ಜೆಡಿಎಸ್ನಲ್ಲಿ ಸಿಎಂ ಇಬ್ರಾಹಿಂ ಬರೀ ನಾಮಕೇವಾಸ್ತೆ ಅಷ್ಟೇ. ಅವರ ಮಾತನ್ನು ಯಾರು ಕೇಳ್ತಾರೆ? ಜೆಡಿಎಸ್ ಅಂದರೆ ಅದು ದೇವೇಗೌಡರು. ಸಿಎಂ ಇಬ್ರಾಹಿಂ ಜೆಡಿಎಸ್ನಲ್ಲಿ ಲೆಕ್ಕಕ್ಕೆ ಇಲ್ಲ ಎಂದು ಹೊಸ ಮಿತ್ರಪಕ್ಷ ಜೆಡಿಎಸ್ ಪರ ಮಾಜಿ ಸಚಿವ ಆರ್ ಅಶೋಕ್ ವಕಾಲತ್ತು ವಹಿಸಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದೇ ಒರಿಜಿನಲ್ ಜೆಡಿಎಸ್ ಎಂಬ ಸಿ ಎಂ ಇಬ್ರಾಹಿಂ ಹೇಳಿಕೆಗೆ ಅಪಹಾಸ್ಯದಿಂದ ನಗುತ್ತಾ ಜೆಡಿಎಸ್ನಲ್ಲಿ ಸಿ ಎಂ ಇಬ್ರಾಹಿಂ ಅವರು ಬರೀ ನಾಮಕೇವಾಸ್ತೆ ಅಷ್ಟೇ. ಅವರ ಮಾತನ್ನು ಯಾರೂ ಕೇಳುವುದಿಲ್ಲ. ಜೆಡಿಎಸ್ ಅಂದರೆ ಅದು ದೇವೇಗೌಡರು. ಇದು ಇಡೀ ದೇಶಕ್ಕೆ, ರಾಜ್ಯಕ್ಕೇ ಗೊತ್ತಿದೆ. ಸಿಎಂ ಇಬ್ರಾಹಿಂ ಜೆಡಿಎಸ್ನಲ್ಲಿ ಲೆಕ್ಕಕ್ಕೇ ಇಲ್ಲದಿರುವಾಗ ಇಬ್ರಾಹಿಂ ಯಾರನ್ನೂ ಅಮಾನತು ಮಾಡಲು ಆಗುವುದಿಲ್ಲ. ಅಮಾನತು ಮಾಡಲು ಕಾರ್ಯಕಾರಿ ಸಮಿತಿ ಅನುಮತಿ ಬೇಕು. ಜೆಡಿಎಸ್ ಕಾರ್ಯಕಾರಿ ಸಮಿತಿ ಜೆಪಿ ಭವನದಲ್ಲಿದೆ ಎಂದರು.
ಈ ಸರ್ಕಾರ ತೆಲಂಗಾಣ ಮತ್ತು ಮಧ್ಯಪ್ರದೇಶವನ್ನು ದತ್ತು ತೆಗೆದುಕೊಂಡಿದೆ.! ಹೀಗಾಗಿ ಎರಡು ರಾಜ್ಯಗಳ ಚುನಾವಣೆಗೆ ಹಣ ಕಳುಹಿಸಿದೆ. ಟ್ರಕ್ನಲ್ಲಿ ಹಣ ಕಳುಹಿಸಿದೆ. ಕಂಟ್ರ್ಯಾಕ್ಟರ್ಬಳಿ ಹಣ ಸಂಗ್ರಹ ಮಾಡಿದೆ. ರಾಜ್ಯವನ್ನು ಲೂಟಿ ಮಾಡಿದೆ. ಇದು ಎಟಿಎಂ ಸರ್ಕಾರವಾಗಿದೆ. ಕಂಟ್ರ್ಯಾಕ್ಟರ್ ಕೇಳಿದಾಗ ಹಣ ಬಿಡುಗಡೆ ಮಾಡಿಲ್ಲ. ಚುನಾವಣೆಗೆ ಸರಿಯಾಗಿ ಹಣ ಬಿಡುಗಡೆ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಕರ್ನಾಟಕಕ್ಕೆ ಬಂದಿರುವ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಹೌದು, ಒಂದೇ ಬಾರಿ ಇಷ್ಟೊಂದು ಹಣ ಹೊಡಿಬೇಡಿ, ಸ್ವಲ್ಪ ಕಾಲ ಡಿಸ್ಕೌಂಟ್ ಮಾಡಿಕೊಳ್ಳಿ ಎಂದು ಸಲಹೆ ನೀಡಲು ಹೈಕಮಾಂಡ್ ಬಂದಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಲೂಟಿಕೋರರು ಎಂದಿದ್ದ ಡಿಕೆಶಿಗೆ ಟಾಂಗ್ ನೀಡಿದ ಅಶೋಕ್, ನಂಬಿಸುವುದಕ್ಕೆ ಏನೇನೋ ಹೇಳುತ್ತಿದ್ದಾರೆ. ಶೇ 40ರಷ್ಟು ಕಮಿಷನ್ ಎಂದು ನಮ್ಮ ಮೇಲೆ ಆರೋಪ ಮಾಡಿದ್ದರು. ಸಾಕ್ಷಿ ಕೇಳಿದಾಗ ಸಾಕ್ಷಿ ಕೊಡಲಿಲ್ಲ. ತನಿಖೆ ಮಾಡಿ ಎಂದು ಹೇಳಿದ್ದೆವು ತನಿಖೆಯನ್ನೂ ಮಾಡಲಿಲ್ಲ. ಈಗ ಅವರದ್ದೇ ಸರ್ಕಾರದ ಅವಧಿಯಲ್ಲಿ ಸಾಕ್ಷಿ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು ಹೈಕಮಾಂಡ್ ಇಲ್ಲಿ ಬಂದು ಕೂತಿದೆ. ರೈಡ್ ಆದ್ಮೇಲೆ ಕಾಂಗ್ರೆಸ್ ಹೈಕಮಾಂಡ್ ನಡುಗಿದೆ ಎಂದರು.
40 ವರ್ಷ ಬಿಜೆಪಿಯಲ್ಲಿದ್ದು, ಶಾಸಕರಾಗಿ ಮುಖ್ಯಮಂತ್ರಿ ಆಗಿ ಎಲ್ಲವನ್ನೂ ಅನುಭವಿಸಿದ್ದಾರೆ. ಈಗ ಕಾಂಗ್ರೆಸ್ಗೆ ಹೋಗಿ ನಾಲ್ಕು ತಿಂಗಳು ಆಗಿದೆ. ಅದೇನು ನಿಷ್ಠೆ ಅವರಿಗೆ ಎಂದು ಜಗದೀಶ್ ಶೆಟ್ಟರ್ ನಡೆಯನ್ನು ವ್ಯಂಗ್ಯವಾಡಿದರು.
ಇದನ್ನೂ ಓದಿ : ಕಾಂಗ್ರೆಸ್ನ ಎಟಿಎಂ ಕಲೆಕ್ಷನ್ ಮಾಡೆಲ್ ಪ್ರದರ್ಶಿಸಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ: ಅಶ್ವತ್ಥನಾರಾಯಣ