ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ದಿಢೀರ್ ಬೆಳವಣಿಗೆಗಳ ಕುರಿತು ವಿದೇಶದಲ್ಲಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದಾರೆ.
ಸಿಎಂ ನಿನ್ನೆ ರಾತ್ರಿ ಸಿದ್ದರಾಮಯ್ಯ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ಗೊಂದಲದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಯಾವ ರೀತಿ ಅತೃಪ್ತರ ಮನವೊಲಿಸಬಹುದು ಎಂಬುದರ ಕುರಿತಂತೆಯೂ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಅತೃಪ್ತರ ಜತೆ ಸಿಎಂ-ವೇಣುಗೋಪಾಲ್ ಮಾತುಕತೆ: ಸಚಿವ ಸ್ಥಾನ ನೀಡುವ ಆಫರ್..?
ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಆತಂಕ ಎದುರಾಗಿದೆ. ಇನ್ನಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ. ಈ ನಾಯಕರಿಬ್ಬರ ಮಾತುಕತೆ ಪ್ರಮುಖ ಬೆಳವಣಿಗೆಯಾಗಿ ಕಂಡುಬರುತ್ತಿದೆ.
ಬಿಜೆಪಿಗೆ ಅವಕಾಶ ಮಾಡಿಕೊಡುವುದು ಬೇಡ:
ರಾಜ್ಯದಲ್ಲಿ ಸರ್ಕಾರ ರಚಿಸುವ ಪ್ರಯತ್ನವನ್ನು ಬಿಜೆಪಿ ಇನ್ನೊಮ್ಮೆ ಮುಂದುವರಿಸಿದಂತೆ ಗೋಚರಿಸುತ್ತಿದೆ. ಮೈತ್ರಿ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು. ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಬೇಕು ಹಾಗೂ ರಾಜೀನಾಮೆ ನೀಡಿರುವ ಇಬ್ಬರು ಶಾಸಕರ ಜೊತೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಬೇಕು ಎಂಬ ನಿಟ್ಟಿನಲ್ಲಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸುವ ವಿಚಾರದಲ್ಲಿ ಸಿದ್ದರಾಮಯ್ಯ ಹಿಂದೇಟು ಹಾಕಿದ್ದು ಆನಂದ್ ಸಿಂಗ್ ಮನವೊಲಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ವಿದೇಶದಿಂದಲೇ ಕುಮಾರಸ್ವಾಮಿ ಪ್ರಯತ್ನ:
ಬಿಜೆಪಿ ಸರ್ಕಾರ ರಚನೆ ಕಸರತ್ತನ್ನು ಮತ್ತೊಮ್ಮೆ ವಿಫಲಗೊಳಿಸಲು ಸಿಎಂ ಕುಮಾರಸ್ವಾಮಿ ವಿದೇಶದಿಂದಲೇ ಪ್ರಯತ್ನ ಮುಂದುವರಿಸಿದ್ದು ರಾಜೀನಾಮೆ ನೀಡಿರುವ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ಜೊತೆಗೆ ಅಸಮಾಧಾನಗೊಂಡಿರುವ ಶಾಸಕರಾದ ನಾಗೇಂದ್ರ, ಮಹೇಶ್ ಕುಮಟಳ್ಳಿ, ಬಿ ಸಿ ಪಾಟೀಲ್ ಸೇರಿ ವಿವಿಧ ಶಾಸಕರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ವಿದೇಶದಿಂದ ಹಿಂತಿರುಗಿದ ನಂತರ ಮಾತುಕತೆ ನಡೆಸುವುದಾಗಿಯೂ ಮತ್ತು ಸರ್ಕಾರವನ್ನು ಅಸ್ಥಿರಗೊಳಿಸದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಕೈ ಕೊಡುತ್ತಿದ್ದಂತೆ ಆನಂದ್ ಸಿಂಗ್ಗೆ ಸಿಕ್ತು ಸಿಹಿ ಸುದ್ದಿ... ಏನದು ಗೊತ್ತೆ?
ವಿದೇಶದಲ್ಲಿ ಇದ್ದರೂ ಕೂಡ ಕುಮಾರಸ್ವಾಮಿ ನಿನ್ನೆಯೇ ಶಾಸಕ ನಾಗೇಂದ್ರ ಹಾಗೂ ಮತ್ತಿತರ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು. ಇಂದು ಕೂಡ ಅವರು ಮಾತುಕತೆ ಮೂಲಕ ಮನವೊಲಿಸುವ ಯತ್ನ ಮುಂದುವರಿಸಲಿದ್ದಾರೆ. ಅತೃಪ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಭರವಸೆಯನ್ನೂ ಕೂಡ ಇದೇ ಸಂದರ್ಭ ನೀಡಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಶತ ಪ್ರಯತ್ನ ನಡೆಸಿದ್ದು, ಇಂದು ಕೂಡ ನಿರಂತರವಾಗಿ ಅತೃಪ್ತರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.