ಬೆಂಗಳೂರು: ಪದ್ಮವಿಭೂಷಣ ಪುರಸ್ಕಾರ ಪಡೆದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಾಡಿಗೆ ನೀಡಿರುವ ಕೊಡುಗೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದ್ದಾರೆ. ಎಸ್.ಎಂ. ಕೃಷ್ಣರ ಉತ್ತಮ ಆಡಳಿತ ಹಾಗೂ ಉತ್ತಮ ಯೋಜನೆಗಳನ್ನು ನೋಡಿಯೇ ಅವರಿಗೆ ಈ ಪುರಸ್ಕಾರ ನೀಡಲಾಗಿದೆ ಎಂದು ಹೇಳಿದರು. ಸದಾಶಿವ ನಗರದಲ್ಲಿರುವ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಬೊಮ್ಮಾಯಿ ಹಾಗೂ ಸಚಿವರಾದ ಆರ್.ಅಶೋಕ್ ಮತ್ತು ಸುಧಾಕರ್ ಅವರು, ಶುಭ ಕೋರಿ ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ, "ಕೃಷ್ಣ ಅವರು ಕರ್ನಾಟಕದ ಹೆಮ್ಮೆ, ನಾಡು ಕಂಡ ಅಪ್ರತಿಮ, ಸರಳ ಸಜ್ಜನಿಕೆಯ ರಾಜಕಾರಣಿ, ರಾಜ್ಯದಲ್ಲಿ ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾಗಿರುವ ಎಸ್.ಎಂ.ಕೃಷ್ಣಗೆ ರಾಷ್ಟ್ರಪತಿಗಳು, ಪ್ರಧಾನಿಗಳ ಶಿಫಾರಿಸಿನ ಮೇರೆಗೆ ಪದ್ಮ ವಿಭೂಷಣ ಕೊಟ್ಟಿರೋದು ನಮಗೆಲ್ಲರಿಗೂ ಸಂತಸ ತಂದಿದೆ. ಕೃಷ್ಣ ಅವರ ಆಡಳಿತ ಕಾಲದಲ್ಲಿ ಹತ್ತು ಹಲವು ಸಮಸ್ಯೆ ಎದುರಿಸಿರೋದು ಒಂದು ಕಡೆಯಾದರೆ ವಿಶೇಷವಾಗಿ ಎಲ್ಲ ವರ್ಗದವರಿಗೂ ವಿಶೇಷ ಯೋಜನೆಗಳನ್ನು ಕೊಟ್ಟಿದ್ದಾರೆ" ಎಂದರು.
ಯಶಸ್ವಿನಿ ಯೋಜನೆಗೆ ₹300 ಕೋಟಿ: "ರೈತರ ಕುಟುಂಬಕ್ಕಾಗಿ ಆರೋಗ್ಯ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದವರು ಕೃಷ್ಣ. ಮಧ್ಯದಲ್ಲಿ ಈ ಯೋಜನೆ ನಿಂತು ಹೋಗಿತ್ತು, ಈಗ ನಾನು ಆ ಯಶಸ್ವಿನಿ ಯೋಜನೆಗೆ 300 ಕೋಟಿ ರೂಪಾಯಿ ಕೊಟ್ಟಿದ್ದೇನೆ. ಅದರಲ್ಲಿ ಮತ್ತಷ್ಟು ಬದಲಾವಣೆ ತಂದು ಮುಂದುವರಿಸುತ್ತೇವೆ. ಹಸಿದ ಹೊಟ್ಟೆಯಲ್ಲಿ ವಿದ್ಯೆ ಕಲಿಯೋದು ಕಷ್ಟ ಎಂದು ಅರಿತು, ಮಧ್ಯಾಹ್ನದ ಬಿಸಿಯೂಟ" ತಂದರು.
"ಕಾವೇರಿ ಹೋರಾಟ, ಕೃಷ್ಣಾ ವಿಷಯದಲ್ಲಿ, ಉತ್ತರ ಕರ್ನಾಟಕದ ವಿಷಯದಲ್ಲಿ ಅವರು ತೆಗೆದುಕೊಂಡ ನಿಲುವುಗಳನ್ನು ನಾವು ನೋಡಿದ್ದೇವೆ. ಐಟಿ-ಬಿಟಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರೋದು ಎಸ್.ಎಂ. ಕೃಷ್ಣ ಅವರಿಂದ. ಎಲ್ಲ ರಂಗದಲ್ಲೂ ಉತ್ತಮ ಆಡಳಿತ, ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈಗ ಇದನ್ನೆಲ್ಲ ಪ್ರಧಾನಿಗಳು ಗುರುತಿಸಿ, ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟಿದ್ದಾರೆ" ಎಂದು ತಿಳಿಸಿದರು. "8 ಜನರ ಪದ್ಮಪ್ರಶಸ್ತಿ ವಿಜೇತರೆಲ್ಲರೂ ಕೂಡ ಒಳ್ಳೆಯ ಸಾಧನೆ ಮಾಡಿದವರೇ ಅವರ ಆಯ್ಕೆ ನೋಡಿದಾಗ ಪ್ರಧಾನಿಗಳ ಕಾರ್ಯಗಳ ಇಡೀ ಜಗತ್ತೇ ನೆಚ್ಚಿಕೊಂಡಿದೆ. ಇದನ್ನು ಕನ್ನಡಿಗರು ಕೂಡ ಮೆಚ್ಚುತ್ತಾರೆ. ಪ್ರಧಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಎಸ್.ಎಂ.ಕೃಷ್ಣ ಸಂತಸ: "ನನ್ನ ಯೋಗ್ಯತೆಗೂ ಮೀರಿದ ದೊಡ್ಡ ಗೌರವವನ್ನು ಪ್ರಧಾನಿಗಳು ಹಾಗೂ ಅಮಿತ್ ಶಾ ನನಗಾಗಿ ನೀಡಿದ್ದಾರೆ. ನನಗೆ ಬಯಸದೇ ಬಂದ ಭಾಗ್ಯವಾಗಿದೆ. ನಾನು ಇದನ್ನು ಕನಸ್ಸು ಮನಸ್ಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಪದ್ಮ ಪ್ರಶಸ್ತಿ ಕೊಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಎಸ್.ಎಂ.ಕೃಷ್ಣ ಹರ್ಷ ವ್ಯಕ್ತಪಡಿಸಿದರು.
"ಬಿಸಿಯೂಟ ಹಾಗೂ ಯಶಸ್ವಿನಿ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾಗಿವೆ. ರಾಜ್ಯ ಸರ್ಕಾರ ನನ್ನನ್ನು ಬಹಳ ಒಳ್ಳೆಯ ರೀತಿಯಲ್ಲಿಯೇ ನಡೆಸಿಕೊಂಡು ಬಂದಿದೆ. ಮೊದಲು ಕೆಂಪೇಗೌಡ ಪ್ರಶಸ್ತಿ, ಆ ನಂತರ ಪದ್ಮ ವಿಭೂಷಣ ಪ್ರಶಸ್ತಿ ಬಂದಿದೆ. ಇವೆಲ್ಲವೂ ದೊಡ್ಡ ಪ್ರಶಸ್ತಿಗಳು ನೀಡುರುವುದಕ್ಕೆ ನಾನು ಸಿಎಂ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಇದನ್ನು ಓದಿ:'ನಾನು ಸುಳ್ಳು ಭರವಸೆ ನೀಡುವ ಮುಖ್ಯಮಂತ್ರಿಯಲ್ಲ': ಕಾಗಿನೆಲೆ ಶ್ರೀಗಳಿಗೆ ಸಿಎಂ ಬೊಮ್ಮಾಯಿ ಸ್ಪಷ್ಟನೆ