ಬೆಂಗಳೂರು: ಕೃಷ್ಣ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ವಿಧಾನಸೌಧಕ್ಕೆ ಹೋಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಅಧಿವೇಶನ ಬೇಗ ಮುಗಿಸುವ ಬಗ್ಗೆ ಪ್ರತಿಪಕ್ಷಗಳ ಸಹಕಾರ ಕೋರುತ್ತೇನೆ. ಏಕೆಂದರೆ 50 ರಿಂದ 60 ಜನ ಕೊರೊನಾದಿಂದ ಸದನಕ್ಕೆ ಬರುತ್ತಿಲ್ಲ. ಹೀಗಾಗಿ ಬೇಗ ಮುಗಿಸಲು ಪ್ರತಿಪಕ್ಷ ನಾಯಕರ ಸಹಕಾರ ಕೇಳುತ್ತೇನೆ ಎಂದರು.
ಅವರು ಯಾವ ರೀತಿ ಸಹಕಾರ ಕೊಡುತ್ತಾರೆ ಎಂಬುದನ್ನು ನೋಡೋಣ. ಒಂದು ಬಿಎಸಿ ಮೀಟಿಂಗ್ ಇದ್ದು, ಆ ಮೀಟಿಂಗ್ನಲ್ಲಿ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಸಿಎಂ, ಇನ್ನೂ ಹೈಕಮಾಂಡ್ನಿಂದ ಯಾವುದೇ ಸಂದೇಶ ಬಂದಿಲ್ಲ. ಹೈಕಮಾಂಡ್ ಆದೇಶಕ್ಕೆ ಕಾಯುತ್ತಿದ್ದೇನೆ. ಹೈಕಮಾಂಡ್ನಿಂದ ಸಂದೇಶ ಬಂದ ನಂತರ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದ ಹಲವೆಡೆ ಮಳೆ ಹಿನ್ನೆಲೆ, ಜಿಲ್ಲೆಗಳ ಡಿಸಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಉಡುಪಿಯಲ್ಲಿ ಹೆಚ್ಚು ಮಳೆ ಆಗಿದೆ. ಬೇರೆ ಕಡೆ ಹೆಚ್ಚೇನು ಅನಾಹುತ ಆಗಿಲ್ಲ. ಭಗವಂತನ ದಯೆಯಿಂದ ಇವತ್ತು ಮಳೆ ಕಡಿಮೆ ಆದರೆ ಸಮಸ್ಯೆ ನಿವಾರಣೆ ಆಗಲಿದೆ. ಹಗಲು ರಾತ್ರಿ ನಮ್ಮ ಡಿಸಿಗಳು ಕೆಲಸ ಮಾಡ್ತಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ಕೇಂದ್ರದಿಂದ ಹೆಲಿಕಾಪ್ಟರ್ ಸೇರಿದಂತೆ ಎಲ್ಲಾ ಸಹಕಾರ ಸಿಕ್ಕಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಕೊರೊನಾ ಹೆಚ್ಚಳವಾಗುತ್ತಿದ್ದು, ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸಾಮಾಜಿಕ ಅಂತರ, ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸಬೇಕು. ನಾಡಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆಯನ್ನು ಸಿಎಂ ನೀಡಿದರು.