ಬೆಂಗಳೂರು: ಕೊರೊನಾ ನಿಯಂತ್ರಣ ಸ್ಥಿತಿಗತಿ ಕುರಿತು ರಾಜ್ಯ ಸರ್ಕಾರಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಡಿಯೋ ಸಂವಾದ ನಡೆಸಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.
ಮಂಗಳವಾರ ಅಪರಾಹ್ನ 12 ಗಂಟೆಗೆ ವಿಧಾನಸೌಧದಿಂದ ಮೋದಿ ನಡೆಸಲಿರುವ ವಿಡಿಯೋ ಸಂವಾದದಲ್ಲಿ ಸಿಎಂ ಯಡಿಯೂರಪ್ಪ ಪಾಲ್ಗೊಳ್ಳಲಿದ್ದು, ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡಲಿದ್ದಾರೆ.
ಕಳೆದ ಬಾರಿ ವಿಡಿಯೋ ಸಂವಾದದ ವೇಳೆ ಕೆಲ ಜಿಲ್ಲೆಗಳ ಬಗ್ಗೆ ಮೋದಿ ಆತಂಕ ವ್ಯಕ್ತಪಡಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ ಅಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಕೊರೊನಾ ಇಳಿಮುಖವಾಗುತ್ತಿರುವುದು, ಅನ್ಲಾಕ್ 5.0 ನಂತರದ ಆರ್ಥಿಕ ಚಟುವಟಿಕೆ ಚೇತರಿಕೆ ಸೇರಿದಂತೆ ಸಮಗ್ರವಾದ ಮಾಹಿತಿಯನ್ನು ಪ್ರಧಾನಿ ಮೋದಿಗೆ ತಿಳಿಸಲಾಗುತ್ತದೆ.
ಕೊರೊನಾ ಎರಡನೇ ಅಲೆ ಭೀತಿ ವಿಶ್ವದಲ್ಲಿ ಎದುರಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯ ಸರ್ಕಾರಕ್ಕೆ ಯಾವ ನಿರ್ದೇಶನ ನೀಡಲಿದ್ದಾರೆ ಎನ್ನುವ ಕುತೂಹಲ ಮನೆಮಾಡಿದೆ.