ಬೆಂಗಳೂರು: "ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಇವತ್ತೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಿಕೊಡುತ್ತೇವೆ. ಈ ಮೂಲಕ 11-12 ಸಾವಿರ ಕುಟುಂಬಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ" ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಕಾಸ ಸೌಧದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ ಅಶೋಕ್ ನಾಯ್ಕ್ ಸೇರಿದಂತೆ ಅಧಿಕಾರಗಳ ಸಭೆ ನಡೆಯಿತು.
"ಶರಾವತಿ ಸಂತ್ರಸ್ತರಿಗೆ ತಾವು ಉಳುಮೆ ಮಾಡುವ ಜಮೀನು ಹಕ್ಕು ನೀಡುವ ಸಂಬಂಧ 60 ವರ್ಷದಿಂದ ಹೋರಾಟ ನಡೆಯುತ್ತಿದೆ. ಮೊನ್ನೆ ಕೇಂದ್ರ ಅರಣ್ಯ ಸಚಿವರ ಭೇಟಿ ಮಾಡಿದ್ದೆವು. ಅವರು ಎಲ್ಲಾ ಸರ್ವೆ ಮಾಡಿ ಪ್ರಪೋಸಲ್ ಕಳುಹಿಸಿ ಎಂದಿದ್ದಾರೆ. ಶರಾವತಿ ಯೋಜನೆಗೆ ಭೂಮಿ ಕೊಟ್ಟು ಈಗ ಭೂಮಿ ಇಲ್ಲದಂತಾಗಿದೆ. ಈಗಾಗಲೇ ಜಿಲ್ಲಾಡಳಿತ ಸರ್ವೆ ಮಾಡಿ ಪ್ರಸ್ತಾವನೆ ರೆಡಿ ಮಾಡಲಾಗಿದೆ. ಸುಮಾರು 9 ಸಾವಿರ ಎಕರೆ ಜಮೀನು ಹಕ್ಕು ನೀಡುವುದಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ" ಎಂದು ಬಿಎಸ್‌ವೈ ಹೇಳಿದರು.
ಶರಾವತಿ ನದಿ ನೀರಿನ ಮುಳುಗಡೆ ಪ್ರದೇಶದಲ್ಲಿ ವಾಸವಾಗಿದ್ದ ಜನರಿಗೆ ಜಾಗ ನೀಡಿ, ಗ್ರಾಮ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಗ್ರಾಮ ಅಂತ ನಮೂದು ಕೂಡಾ ಮಾಡಲಾಗಿತ್ತು. ಆದರೆ, ಇದೀಗ ಅರಣ್ಯ ಭೂಮಿ ಎಂದು ತಕರಾರು ಬಂದಿದೆ. ಅರಣ್ಯ ಭೂಮಿ ಅಂತ ಸಂತ್ರಸ್ತರನ್ನು ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದಾರೆ. ಹೀಗಾಗಿ ಮುಳುಗಡೆಗೆ ಒಳಗಾಗಿದ್ದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಮನೆಯನ್ನೂ ಕೂಡ ಕಟ್ಟಿಕೊಡಲಾಗಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಬಿಡುಗಡೆ ಮಾಡಲು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
27 ಸರ್ಕಾರಿ ಆದೇಶಗಳಲ್ಲಿ ಪುನರ್ವಸತಿಗೆ ಬಿಡುಗಡೆಯಾದ ಪ್ರದೇಶ 9,119 ಎಕರೆಯಾಗಿರುತ್ತದೆ. ಇದನ್ನು ಕೇಂದ್ರ ಸರ್ಕಾರದ ಆದೇಶಕ್ಕೆ ಸಲ್ಲಿಸಬೇಕು. 98 ಪ್ರಸ್ತಾವಗಳಲ್ಲಿ ಅಳತೆ ಮಾಡಿದ್ದ ವಿಸ್ತೀರ್ಣ 9,653 ಎಕರೆಯಾಗಿದೆ. ಸ್ಥಳ ಪರೀಶಿಲನೆ ನಡೆಸಿ ಅಳತೆ ಮಾಡಿರುವ ವಿಸ್ತೀರ್ಣ 10,315 ಎಕರೆಯಾಗಿದೆ. ಸರ್ಕಾರಿ ಅದೇಶಗಳಲ್ಲಿ ಬಿಡುಗಡೆಯಾಗಿರುವ ವಿಸ್ತೀರ್ಣಕ್ಕಿಂತ ಅಂದಾಜು 1196 ಎಕರೆಯ ಹೆಚ್ಚು ವಿಸ್ತೀರ್ಣ ಪ್ರಸ್ತಾವನೆಗಳಲ್ಲಿ ಬಂದಿದ್ದು ಈ ಹೆಚ್ಚುವರಿ ವಿಸ್ತೀರ್ಣವನ್ನು ಸರ್ಕಾರದ ಗಮನಕ್ಕೆ ತರಬೇಕು. ಈಗಾಗಲೇ 15 ರಿಂದ 20 ಗ್ರಾಮಗಳಲ್ಲಿ ಸರ್ವೆ ಮಾಡಬೇಕೆಂದು ಹೊಸದಾಗಿ ಅರ್ಜಿಗಳು ಬಂದಿದ್ದು ಮುಂದೆಯೂ ಸಹ ಹೊಸ ಅರ್ಜಿಗಳು ಬರುವ ಸಂಭವವಿದ್ದು, ಈ ಬಗ್ಗೆ ಹೊಸದಾಗಿ ನಿರ್ಣಯ ಕೈಗೊಳ್ಳಲು ತೀರ್ಮಾನ ಮಾಡಲಾಯಿತು.
ಶರಾವತಿ ಸಂತ್ರಸ್ತರ ಬವಣೆ: 1959ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಆರಂಭವಾದ ಕಾಲದಿಂದಲೂ ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಮೂರನೇ ತಲೆಮಾರು ಬಂದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಈ ಅವಧಿಯಲ್ಲಿ ಕಾಂಗ್ರೆಸ್ 8 ಬಾರಿ, ಜನತಾ ಪರಿವಾರ 3, ಬಿಜೆಪಿ 2 ಮತ್ತು ಮೂರು ಸಮ್ಮಿಶ್ರ ಸರಕಾರ ಆಡಳಿತ ನಡೆಸಿವೆ. ಸಮಸ್ಯೆ ಇತ್ಯರ್ಥಕ್ಕೆ ಬಹಳಷ್ಟು ಅವಕಾಶ ಸಿಕ್ಕರೂ ರಾಜಕೀಯ ಪಕ್ಷಗಳು ಬಳಸಿಕೊಳ್ಳದೆ ತಮ್ಮ ಅವಧಿಯಲ್ಲಾದ ಲೋಪವನ್ನು ಮುಚ್ಚಿಟ್ಟುಕೊಂಡು ಮತ್ತೊಬ್ಬರ ಮೇಲೆ ಕೆಸರೆರಚಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಮುಂದಿಟ್ಟುಕೊಂಡು ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಹೀಗಾಗಿ ಕಳೆದ 60 ವರ್ಷಗಳಿಂದಲೂ ಶಾಶ್ವತ ಪರಿಹಾರ ನೀಡಿಲ್ಲ.
ಇದನ್ನೂ ಓದಿ: ಸ್ಮಶಾನದಲ್ಲಿದ್ದ ಸುಟ್ಟ ಶವದ ಬೂದಿಯೇ ಮಾಯ: ಕಂಗಾಲಾದ ಕುಟುಂಬಸ್ಥರು