ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ ಎಂದು ರಾಜಕೀಯ ವಲಯಗಳು ವಿಶ್ಲೇಷಿಸುತ್ತಿವೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಗ್ಗಿಸಲು ಪಕ್ಷದೊಳಗೆ ಇರುವ ಶಕ್ತಿಗಳು ಸತತ ಪ್ರಯತ್ನ ನಡೆಸಿದ್ದರಾದರೂ ಅಂತಹ ಎಲ್ಲ ಪ್ರಯತ್ನಗಳಿಗೂ ಯಡಿಯೂರಪ್ಪ ಒಂದೇ ಏಟಿಗೆ ಅಡ್ಡೇಟು ಹಾಕಿಬಿಟ್ಟರು ಎಂಬುದು ರಾಜಕೀಯ ವಲಯಗಳ ವ್ಯಾಖ್ಯಾನ.
ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಸರ್ಕಾರ ರಚನೆಗೆ ಕಾರಣರಾದ ವಲಸಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಯಡಿಯೂರಪ್ಪ ಅವರ ಪಟ್ಟಾಗಿತ್ತು. ಆದರೆ, ವಲಸಿಗರಿಗೆ ಆದ್ಯತೆ ನೀಡಿದರೆ ಮೂಲ ಬಿಜೆಪಿಗರಿಗೆ ಅನ್ಯಾಯವಾಗುತ್ತದೆ ಎಂದು ಅವರ ವಿರೋಧಿಗಳು ವ್ಯವಸ್ಥಿತವಾಗಿ ಹೈಕಮಾಂಡ್ಗೆ ದೂರು ನೀಡಿದ್ದಲ್ಲದೇ ಹಲವರ ಹೆಸರುಗಳನ್ನು ಸೇರ್ಪಡೆ ಮಾಡಿಸಲು ಯತ್ನಿಸಿದರು. ಆ ಪ್ರಕಾರ ವಲಸಿಗರ ಜತೆ ಐದಾರು ಮಂದಿ ಮೂಲ ಬಿಜೆಪಿಯವರೂ ಸಂಪುಟಕ್ಕೆ ಸೇರ್ಪಡೆಯಾಗಬೇಕು ಎಂಬ ಪ್ರಸ್ತಾವನೆ ಸಿದ್ಧವಾಯಿತು. ಇದರಲ್ಲಿ ಸಂಘ ಪರಿವಾರ ಮೂಲದವರೇ ಹೆಚ್ಚಾಗಿದ್ದುದನ್ನು ಕಂಡ ಯಡಿಯೂರಪ್ಪ ಮೂಲ ಬಿಜೆಪಿಗರ ಪಟ್ಟಿಯಲ್ಲಿ ತಮಗೆ ಆಪ್ತರಾದ ಮೂವರನ್ನು ಸೇರ್ಪಡೆ ಮಾಡಿಸಿದರು. ಅದರ ಪ್ರಕಾರ ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್, ಉಮೇಶ್ ಕತ್ತಿ ಅವರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಬೇಕಿತ್ತು. ಹಾಗೆಯೇ ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಾಲಪ್ಪ ಆಚಾರ್ ಅವರು ಕೂಡಾ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವುದು ನಿಶ್ಚಿತವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಸಿ.ಪಿ.ಯೋಗೇಶ್ವರ್ ಅವರ ಸೇರ್ಪಡೆಯ ಬಗ್ಗೆ ಯಡಿಯೂರಪ್ಪ ಅವರ ಆಪ್ತರೇ ತಕರಾರು ಎತ್ತತೊಡಗಿದರೆ, ಉಳಿದವರ ಸೇರ್ಪಡೆ ಸದ್ಯಕ್ಕೆ ಬೇಡ. ಈಗ ವಲಸಿಗರಿಗೆ ಮಾತ್ರ ಅದ್ಯತೆ ಕೊಡೋಣ ಎಂದು ಯಡಿಯೂರಪ್ಪ ಅವರು ವರಿಷ್ಠರಿಗೆ ವಿವರಿಸತೊಡಗಿದರು.
ಅವರ ಪ್ರಕಾರ, ಈಗ ಮೂಲ ಬಿಜೆಪಿಯವರಿಗೆ ಆದ್ಯತೆ ನೀಡಲು ಹೋದರೆ ಸಂಘರ್ಷ ಶುರುವಾಗುತ್ತದೆ. ಹೀಗಾಗಿ ಸದ್ಯಕ್ಕೆ ವಲಸಿಗರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳೋಣ. ಉಳಿದಂತೆ ಮೂಲ ಬಿಜೆಪಿಗರಿಗೆ ಮುಂದಿನ ದಿನಗಳಲ್ಲಿ ಆದ್ಯತೆ ಕೊಡೋಣ ಎಂಬುದು ಅವರ ಮಾತಾಗಿತ್ತು. ಯಡಿಯೂರಪ್ಪ ಅವರ ಪ್ರಸ್ತಾವ ಹೈಕಮಾಂಡ್ಗೂ ಇಷ್ಟವಾಯಿತು. ಹಾಗೆಯೇ ಇದನ್ನೊಪ್ಪದೆ ಬೇರೆ ದಾರಿಯೂ ಅವರ ಮುಂದಿರಲಿಲ್ಲ. ಹೀಗಾಗಿ ಹತ್ತು ಮಂದಿ ವಲಸಿಗರು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಆದರು. ಇದರಿಂದಾಗಿ ನಂಬಿದವರನ್ನು ಯಡಿಯೂರಪ್ಪ ಕೈ ಬಿಡುವುದಿಲ್ಲ ಎಂಬ ಸಂದೇಶ ರವಾನೆಯಾಯಿತು. ಮಂತ್ರಿಗಳಾಗದೇ ಇರುವ ಉಳಿದ ವಲಸಿಗರಿಗೂ ಭರವಸೆ ಬಂತು. ಹಾಗೆಯೇ ಮೂಲ ಬಿಜೆಪಿಗರಿಗೆ ಅವಕಾಶ ನೀಡದ ಅವರ ಕ್ರಮದಿಂದ ಪಕ್ಷದೊಳಗಿದ್ದ ಅವರ ವಿರೋಧಿಗಳ ಲೆಕ್ಕಾಚಾರ ವಿಫಲವಾಯಿತು. ಮುಂದಿನ ದಿನಗಳಲ್ಲಿ ಮಂತ್ರಿ ಮಂಡಲ ಪುನರ್ ರಚನೆ ಮಾಡೋಣ ಎಂದರೆ ಸಂಪುಟದಲ್ಲಿರುವ ಮೂಲ ಬಿಜೆಪಿಯವರ ಪೈಕಿ ಕೆಲವರನ್ನು ತೆಗೆದು ಆ ಜಾಗವನ್ನು ಸ್ವಪಕ್ಷದ ಮೂಲದವರಿಗೆ ಕೊಡುವುದು. ಹಾಗೆಯೇ ಬಾಕಿ ಉಳಿದಿರುವ ಜಾಗವನ್ನು ವಲಸಿಗರ ಪೈಕಿ ಹಲವರಿಗೆ ಕೊಟ್ಟು ಸಮಾಧಾನ ಪಡಿಸುವುದು ಯಡಿಯೂರಪ್ಪ ಅವರ ಸದ್ಯದ ಯೋಚನೆ. ಹೀಗೆ ಏಕಕಾಲಕ್ಕೆ ತಮ್ಮ ವಿರೋಧಿಗಳನ್ನು ಮಣಿಸಿದ, ದೆಹಲಿ ವರಿಷ್ಠರನ್ನು ಒಲಿಸಿದ ಯಡಿಯೂರಪ್ಪ ಕ್ರಮ ರಾಜಕೀಯವಾಗಿ ಅವರು ಇನ್ನಷ್ಟು ಸುಭದ್ರರಾದರು ಎಂಬ ಸಂದೇಶವನ್ನು ರವಾನಿಸಿದೆ ಎಂದು ರಾಜಕೀಯ ವಲಯಗಳು ವ್ಯಾಖ್ಯಾನಿಸುತ್ತಿವೆ.