ಬೆಂಗಳೂರು: ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಅಂಗವಾಗಿ ಸಿಎಂ ಯಡಿಯೂರಪ್ಪ ಮಂಗಳವಾರ ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಹಾಗು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಸಿಎಂ, ಕೆಂಗಲ್ ಹನುಮಂತಯ್ಯ ಓರ್ವ ದೂರದೃಷ್ಟಿ ಹೊಂದಿದ್ದ ನಾಯಕ ಹಾಗು ಮುತ್ಸದ್ದಿ ರಾಜಕಾರಣಿಯಾಗಿದ್ದವರು. ದಕ್ಷ ಆಡಳಿತ ನೀಡುವ ಮೂಲಕ ರಾಜ್ಯದ ಏಳಿಗೆಗಾಗಿ ಅವರು ಶ್ರಮಿಸಿದ್ದರು ಎಂದು ಕೊಂಡಾಡಿದರು.
ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ರೈಲ್ವೇ ಸಚಿವರಾಗಿ, ಆಡಳಿತ ಸುಧಾರಣಾ ಆಯೋಗದ ಮೊದಲ ಅಧ್ಯಕ್ಷರಾಗಿಯೂ ಕೆಂಗಲ್ ಅವರ ಸೇವೆ ಮಹತ್ವದ್ದು ಎಂದು ಅವರು ಸ್ಮರಿಸಿದರು.
ಕನ್ನಡ ಭಾಷೆ, ಸಂಸ್ಕೃತಿ, ಕರ್ನಾಟಕದ ಏಕೀಕರಣಕ್ಕೂ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರು ಕಟ್ಟಿಸಿದ ವಿಧಾನಸೌಧ ಕಟ್ಟಡ ದೇಶದಲ್ಲಿಯೇ ಭವ್ಯ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.