ಬೆಂಗಳೂರು: ಹಿರಿಯ ಸಚಿವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸತತವಾಗಿ ಮೂರು ಗಂಟೆಗಳಿಂದ ಸುದೀರ್ಘ ಚರ್ಚೆ ನಡೆಸಿದ್ದು, ರಾತ್ರಿ 11 ಗಂಟೆಯಾದರೂ ಚರ್ಚೆ ಮುಂದುವರೆದಿದೆ.
8 ಗಂಟೆಯಿಂದ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಸಚಿವರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ,ಕಂದಾಯ ಸಚಿವ ಆರ್.ಅಶೋಕ್ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ.
ಸಭೆ ಆರಂಭಗೊಂಡು ಮೂರು ಗಂಟೆಯಾದರೂ ಮುಗಿದಿಲ್ಲ. ತಡರಾತ್ರಿವರೆಗೂ ಸಿಎಂ ಸಭೆ ಮುಂದುವರೆದಿದೆ.ಇನ್ನು ನೂತನ ಮಂತ್ರಿಯಾಗುವ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ರಾತ್ರಿ 1 ಗಂಟೆ ಆದರೂ ಸಿಎಂ ಮನೆಯಲ್ಲಿ ಸಚಿವಸ್ಥಾನದ ಅಕಾಂಕ್ಷಿ ಮುನಿರತ್ನ ಬೀಡು ಬಿಟ್ಟಿದ್ದಾರೆ.
ಮಧ್ಯಾಹ್ನದಿಂದ ಸಿಎಂ ಮನೆಯಲ್ಲೇ ಇರುವ ಮುನಿರತ್ನ, ಸಚಿವಾಕಾಂಕ್ಷಿಗಳೆಲ್ಲ ಸಿಎಂ ಭೇಟಿಯಾಗಿ ತೆರಳಿದರೂ ಮುನಿರತ್ನ ಮಾತ್ರ ಇನ್ನೂ ಸಿಎಂ ಮನೆ ಬಿಟ್ಟು ಹೊರಬಂದಿಲ್ಲ. ಪಟ್ಟಿಯಲ್ಲಿ ತಮ್ಮ ಹೆಸರು ಪೈನಲ್ ಆಗದ ಹಿನ್ನೆಲೆಯಲ್ಲಿ ಸಿಎಂ ಮನೆಯಲ್ಲೇ ಇದ್ದಾರೆ ಎನ್ನಲಾಗಿದೆ.
ಸಿಎಂ ನಿವಾಸದಿಂದ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಸಂಸದ ಶಿವಕುಮಾರ್ ಉದಾಸಿ ನಿರ್ಗಮಿಸಿದ್ದಾರೆ. ಸಭೆ ಇನ್ನು ಮುಂದುವರೆದಿದೆ. ನಾಳೆ ನಿಮಗೆ ಎಲ್ಲವೂ ಗೊತ್ತಾಗಲಿದೆ ಎಂದಷ್ಟೇ ಹೇಳಿದ ಸಚಿವ ಸ್ಥಾನದ ಆಕಾಂಕ್ಷಿ ಅರವಿಂದ್ ಬೆಲ್ಲದ್ ನಿರ್ಗಮಿಸಿದರು.