ಬೆಂಗಳೂರು: ನೂತನವಾಗಿ ಖಾತೆ ಹಂಚಿಕೆ ನಂತರ ಅಸಮಾಧಾನಗೊಂಡಿದ್ದ ನಾಲ್ವರು ಸಚಿವರಲ್ಲಿ ಮೂವರ ಸಂಧಾನ ಸಫಲವಾಗಿದ್ದು, ಮತ್ತೋರ್ವರ ಸಂಧಾನ ಸಸ್ಪೆನ್ಸ್ ಆಗಿ ಉಳಿದಿದೆ.
ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಎಸ್ವೈ ನಡೆಸಿದ ಸಂಧಾನ ಸಭೆ ಬಹುತೇಕ ಸಫಲವಾಗಿದೆ. ಆರ್.ಶಂಕರ್ ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಒಪ್ಪಿಕೊಂಡು ಅಸಮಾಧಾನ ಮುಗಿದ ಅಧ್ಯಾಯ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಗೋಪಾಲಯ್ಯ ಕೂಡ ಅಬಕಾರಿ ಖಾತೆಗೆ ಜೈ ಎಂದಿದ್ದಾರೆ.
ಓದಿ: ಶ್ರೀರಾಮ ಮಂದಿರ ನಿಧಿ ಸಂಗ್ರಹ: ಸ್ಕೂಟಿ ಮೇಲೆ ತೆರಳಿ ದೇಣಿಗೆ ಸಂಗ್ರಹಿಸಿದ ಶಾಸಕಿ!
ಆದರೆ ಈ ಇಬ್ಬರು ಸಚಿವರ ನಂತರ ಎಂಟಿಬಿ ನಾಗರಾಜ್ ಮತ್ತು ಡಾ.ಸುಧಾಕರ್ ಅವರನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಪೌರಾಡಳಿತ ಮತ್ತು ಸಕ್ಕರೆ ಖಾತೆ ಒಪ್ಪಿಕೊಂಡಿರುವ ಎಂಟಿಬಿ ಸರ್ಕಾರಿ ವಾಹನ ಬಳಸುವ ಮೂಲಕ ಬಹುತೇಕ ಅಸಮಾಧಾನ ಶಮನವಾಗಿದೆ ಎನ್ನುವ ಸುಳಿವು ನೀಡಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ನಂತರ ಸುಧಾಕರ್ ಜೊತೆಗಿನ ಸಂಧಾನ ಸಭೆ ಮಾತ್ರ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಸುಧಾಕರ್ ಜೊತೆ ಸಿಎಂ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಮನವೊಲಿಕೆ ಕಾರ್ಯ ನಡೆಸಿದರು. ಆದರೆ ಇದಕ್ಕೆ ಸುಧಾಕರ್ ಪ್ರತಿಕ್ರಿಯೆ ಏನು ಎನ್ನುವುದು ಸಧ್ಯಕ್ಕೂ ನಿಗೂಢವಾಗಿದೆ. ಈ ಬಗ್ಗೆ ಸ್ವತಃ ಸುಧಾಕರ್ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ನಾಲ್ವರು ಸಚಿವರಲ್ಲಿ ಮೂವರ ಮನವೊಲಿಕೆ ಸಫಲವಾಗಿದ್ದು, ಸುಧಾಕರ್ ವಿಚಾರದಲ್ಲಿ ಮಾತ್ರ ಸಸ್ಪೆನ್ಸ್ ಮುಂದುವರೆದಿದೆ.