ಬೆಂಗಳೂರು: ಪಕ್ಷದ ಶಾಸಕರ ಸಭೆ ಬಳಿಕ ಸಿಎಂ ಯಡಿಯೂರಪ್ಪ ಇದೀಗ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದಿದ್ದಾರೆ.
ಇಂದು ದಿನಪೂರ್ತಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ತ್ರೈಮಾಸಿಕ ಅಭಿವೃದ್ದಿ, ಯೋಜನೆಗಳ ಅನುಷ್ಠಾನ, ಅನುದಾನ ವೆಚ್ಚ, ಅನುದಾನ ಹಂಚಿಕೆ, ಕೊರೊನಾ ನಿಯಂತ್ರಣ, ಲಸಿಕಾ ಕಾರ್ಯಕ್ರಮ ಪ್ರಗತಿ, ಮುಂದಿನ ಬಜೆಟ್ಗೆ ಜಿಲ್ಲೆಗಳಿಂದ ಸಲ್ಲಿಸಬೇಕಾದ ಪ್ರಸ್ತಾವನೆಗಳು ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಚೆರ್ಚೆ ನಡೆಯಲಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಸಭೆ ಕರೆದಿದ್ದ ಸಿಎಂ ಯಡಿಯೂರಪ್ಪ ಒಂದೂವರೆ ವರ್ಷದ ಬಳಿಕ ಇದೀಗ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ. ಸಭೆಗೆ ರಾಜ್ಯ ಸಚಿವರು, ನಿಗಮ ಮಂಡಳಿ ಅಧ್ಯಕ್ಷರು, ಉಸ್ತುವಾರಿ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಅಗತ್ಯ ದಾಖಲೆಗಳು, ಅನುದಾನ ಖರ್ಚು ವೆಚ್ಚು, ಪ್ರಗತಿಯಲ್ಲಿರುವ ಕಾಮಗಾರಿಗಳು, ಅನುದಾನ ಅಗತ್ಯತೆ ಸೇರಿದಂತೆ ಸೂಕ್ತ ಪ್ರಸ್ತಾವನೆಗಳು ಸೇರಿದಂತೆ ಅಗತ್ಯ ತಯಾರಿಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಬಜೆಟ್ ತಯಾರಿ ಪೂರ್ವ ಜಿಲ್ಲಾಡಳಿತಗಳಿಂದ ಮಾಹಿತಿ ಸಂಗ್ರಹಿಸುವ ಮೂಲಕ ಮುಂದಿನ ಬಜೆಟ್ನಲ್ಲಿ ಯಾವೆಲ್ಲ ಯೋಜನೆಗಳಿಗೆ ಆದ್ಯತೆ ನೀಡಬೇಕು.ಜನಪರ ಕಾರ್ಯಕ್ರಮಗಳನ್ನು ರೂಪಿಸಲು ಈ ಸಭೆಯಿಂದ ಅನುಕೂಲವಾಗಲಿದೆ. ಇದರ ಜೊತೆಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯಲಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿನ ಕಾಮಗಾರಿಗಳ ಪ್ರಗತಿ, ಯೋಜನೆಗಳ ಅನುಷ್ಠಾನದ ಸ್ಥಿತಿಗತಿ ಬಗ್ಗೆ ಡಿಸಿ ಹಾಗೂ ಸಿಇಒ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಈ ಸಂಬಂಧ ಯೋಜನೆ, ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ. ಆ ಮೂಲಕ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಂಬಂಧ ಕಾರ್ಯತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ.