ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಮೀಸಲಾತಿ ಹೋರಾಟಗಳು ಭಾರಿ ಚರ್ಚೆಗೆ ಗ್ರಾಸವಾಗಿರುವುದು ತಿಳಿದ ವಿಚಾರ. ಆದರೆ, ಇದರಲ್ಲಿ ಹೈರಾಣಾಗಿರುವುದು ಮಾತ್ರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಹೌದು, ವಿವಿಧ ಸಮುದಾಯಗಳು ಹಲವು ವರ್ಗಗಳಡಿ ಮೀಸಲಾತಿಗಾಗಿ ಒತ್ತಾಯಿಸುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ಮುಖ್ಯವಾಗಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಹೋರಾಟ, ಪ್ರತಿಭಟನೆ ಬಿಜೆಪಿ ಸರ್ಕಾರಕ್ಕೆ ಇರಿಸು - ಮುರಿಸು ತಂದಿದೆ. ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಬೇಕೆಂದು ಒತ್ತಾಯಿಸಿ ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದ ಹೋರಾಟ, ಇದೀಗ ರಾಜಕೀಯ ತಿರುವು ಪಡೆದು, ಇದ್ದಕ್ಕಿದ್ದಂತೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ದಶಕಗಳಿಂದಲೂ ಯಡಿಯೂರಪ್ಪ ಅವರು ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ತಮ್ಮ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ಸಮುದಾಯದ ಒಂದಿಬ್ಬರು ನಾಯಕರನ್ನು ಮಂತ್ರಿ ಮಾಡಿದ್ದನ್ನು ಬಿಟ್ಟರೆ, ಸಮುದಾಯಕ್ಕಾಗಿ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ ಎಂಬ ಆರೋಪದ ಮಾತುಗಳು ಆ ಸಮುದಾಯದಿಂದ ಕೇಳಿ ಬಂದಿದೆ. 2 ಎ ಮೀಸಲಾತಿ ಸಿಗದ ಹೊರತು ಮಠಕ್ಕೆ ಮರಳುವುದಿಲ್ಲ. ಸರ್ಕಾರದಿಂದ ಬರುವ ಸುದ್ದಿಗಾಗಿ ಕಾಯುತ್ತಿದ್ದೇವೆ. ನಮಗೆ ಯಾವುದೇ ಅನುದಾನ, ನಿಗಮ ಮಂಡಳಿ ಬೇಡ. ನಮ್ಮ ಸಮುದಾಯವನ್ನು 2 ಎ ಗೆ ಸೇರಿಸಬೇಕೆಂಬುದು ನಮ್ಮ ಒತ್ತಾಯ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಈಗಾಗಲೇ ಹೇಳಿದ್ದಾರೆ.
ರಾಜಕೀಯ ಮೇಲಾಟ : ಪಂಚಮಸಾಲಿ ಹೋರಾಟದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು, ಮುಖಂಡರು ಭಾಗಿಯಾಗಿದ್ದಾರೆ. ಹಾಗಾಗಿ, ಭಾನುವಾರ ನಡೆದ ಬೃಹತ್ ಸಮಾವೇಶದಲ್ಲಿ ರಾಜಕೀಯ ಮೇಲಾಟವೇ ನಡೆದು ಹೋಯಿತು. ಸ್ವಾಮೀಜಿ ಅವರು ಹಿಡಿದ ಪಟ್ಟು ಯಡಿಯೂರಪ್ಪ ಹಾಗೂ ಪಂಚಮಸಾಲಿ ಸಮುದಾಯದ ಸಚಿವರಿಬ್ಬರ ಇರಿಸು - ಮುರಿಸುಗೆ ಕಾರಣವಾಗಿತ್ತು. ತಕ್ಷಣ ಸಚಿವರನ್ನು ಕರೆಸಿಕೊಂಡ ಸಿಎಂ ಗಂಭೀರವಾಗಿ ಚರ್ಚೆ ನಡೆಸಿದರು. ನಂತರ ಸಚಿವರಾದ ಮುರುಗೇಶ್ ನಿರಾಣಿ ಹಾಗೂ ಸಿ.ಸಿ.ಪಾಟೀಲ್ ಅವರು ನಿನ್ನೆ ಸುದ್ದಿಗೋಷ್ಠಿ ನಡೆಸಿ, ಮೀಸಲಾತಿ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದು ಆರೋಪಿಸಿದ್ದರು. ವಿಜಯಾನಂದ ಕಾಶೆಂಪುರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿಕಾರಿದರು.
ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಈ ಸಮಿತಿಯನ್ನು ರಚಿಸುವ ದಿನಾಂಕ ಈಗಲೇ ಘೋಷಿಸಬೇಕು. ಎಷ್ಟು ದಿನದಲ್ಲಿ ಸಮಿತಿಯು ವರದಿ ನೀಡಲಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ಮೀಸಲಾತಿಯ ನಿಯಮಗಳೇನು? : ಆರ್ಟಿಕಲ್ 342 ರ ಅಡಿ ಮತ್ತು ಅನೇಕ ಸುಪ್ರೀಂಕೋರ್ಟ್ ತೀರ್ಪುಗಳ ಪ್ರಕಾರ, ಯಾವುದೇ ಸಮುದಾಯಕ್ಕೆ ಹಿಂದುಳಿದ ವರ್ಗದ ಸ್ಥಾನಮಾನವನ್ನು ನೀಡಲು ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಮನವಿಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಬೇಕು, ನಂತರ ನ್ಯಾಯಾಂಗ ಪ್ರಾಧಿಕಾರಕ್ಕೆ ಕಳುಹಿಸಬೇಕು, ಬಳಿಕ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಏಕಾಏಕಿ ಮೀಸಲಾತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ಇನ್ನು, ಕುರುಬ ಸಮುದಾಯ ಹಾಗೂ ವಾಲ್ಮೀಕಿ ಸಮುದಾಯದವರು ತೆರೆಮರೆಯಲ್ಲಿ ಮೀಸಲಾತಿಗಾಗಿ ಕಸರತ್ತು ನಡೆಸುತ್ತಲೇ ಇದ್ದಾರೆ. ಇದೀಗ ಒಕ್ಕಲಿಗ ಸಮುದಾಯ ಮೀಸಲಾತಿಗಾಗಿ ಮುಂಚೂಣಿಗೆ ಬಂದಿದೆ. ಮುಂದಿನ ತಿಂಗಳು ಬಜೆಟ್ ಅಧಿವೇಶನ ಅರಂಭವಾಗುತ್ತಿದ್ದು, ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೆಲ್ಲವನ್ನೂ ಹೇಗೆ ಎದುರಿಸುವರು ಎಂಬುವುದನ್ನು ಕಾದು ನೋಡಬೇಕು.