ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣದ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನವರ ಪದಗ್ರಹಣ ಕಾರ್ಯಕ್ರಮಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದ್ರೆ ಕೋವಿಡ್ ಇರುವುದರಿಂದ ಹೆಚ್ಚು ಜನರನ್ನು ಸೇರಬಾರದೆಂಬ ನಿರ್ಬಂಧವಿದೆ. ಜನರನ್ನು ಸೇರಿಸದೆ ಇತಿಮಿತಿಯಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿ ಎಂದು ಸಿಎಂ ಹೇಳಿದ್ದಾರೆ.
ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡದ ಸರ್ಕಾರದ ವಿರುದ್ಧ ನಿನ್ನೆಯಷ್ಟೇ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿಎಂ ಯಡಿಯೂರಪ್ಪನವರು ನುಡಿದಂತೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸೂಕ್ತ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮ ನಡೆಸುವುದಾಗಿ ಡಿಕೆಶಿ ಈಗಾಗಲೇ ಭರವಸೆ ಕೊಟ್ಟಿದ್ದು, ಈ ಹಿಂದೆ ನಿಗದಿಪಡಿಸಿದಂತೆ ಜೂನ್ 14ರಂದೇ ಪದಗ್ರಹಣ ಸಮಾರಂಭ ನೆರವೇರುವುದು ಖಚಿತವಾಗಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತ ಪದಗ್ರಹಣ ಸಮಾರಂಭ 150 ಅತಿಥಿಗಳ ಸಮ್ಮುಖದಲ್ಲಿ ನೆರವೇರಲಿದೆ. ರಾಜ್ಯದ ಜಿಲ್ಲಾ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ 1,800ಕ್ಕೂ ಹೆಚ್ಚು ಕಡೆ ಎಲ್ಇಡಿ ಪರದೆ ಅಳವಡಿಸಿ ಸಮಾರಂಭದ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ.