ಬೆಂಗಳೂರು: ಬಹಳಷ್ಟು ಜನರು ಕಳೆದ ವಾರದಿಂದ ಬೆಂಗಳೂರಿನಿಂದ ಹಳ್ಳಿಗಳ ಕಡೆಗೆ ಹೋಗ್ತಾ ಇದ್ದಾರೆ. ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಆಯಾ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಆಸ್ಪತ್ರೆಗಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು, ರೆಮ್ಡಿಸಿವಿರ್ ಸರಿಯಾಗಿ ಬಳಕೆ ಮಾಡಬೇಕು ಎಂದು ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ಜನ್, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಡೀನ್ ಮತ್ತು ನಿರ್ದೇಶಕರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದರು.
ಪ್ರತಿ ತಾಲೂಕಿನಲ್ಲಿ ಕೋವಿಡ್ ಸೆಂಟರ್
ಜಿಲ್ಲಾಡಳಿತಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ಮಾತನಾಡಿದ ಸಿಎಂ, ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಳ್ಳಬೇಕು, ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಹೋಂ ಐಸೋಲೇಷನ್ ಬಯಸುವವರಿಗೆ ಅಲ್ಲೇ ಸೂಕ್ತ ವೈದ್ಯಕೀಯ ಸಲಹಾ ವ್ಯವಸ್ಥೆ ಮಾಡಬೇಕು. ಗಡಿ ಜಿಲ್ಲೆಗಳಿಗೆ ಮಹಾರಾಷ್ಟ್ರ ಮುಂತಾದ ಕಡೆಗಳಿಂದ ಸೋಂಕಿತರು ಬರುತ್ತಾರೆ. ಅವರೇ ನಮ್ಮ ಆಸ್ಪತ್ರೆಗಳಲ್ಲಿ ತುಂಬಾ ಇದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ರೋಗಿಗಳಿಗೆ ಮೆಡಿಕಲ್ ಕಿಟ್ ಕೊಡುವ ವ್ಯವಸ್ಥೆ ಕೂಡ ತಮ್ಮ ಹಂತದಲ್ಲಿ ಮಾಡಬೇಕು. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಕಿಟ್ ವಿತರಿಸಲು ಹಾಗೂ ಆರೋಗ್ಯ ಮೇಲ್ವಿಚಾರಣೆಗಾಗಿ ತಂಡಗಳನ್ನು ರಚಿಸುವಂತೆ ಸಿಎಂ ಸಲಹೆ ನೀಡಿದರು.
ಸೋಂಕಿತರ ಕಾಳಜಿಗೆ ಟಾಸ್ಕ್ಫೋರ್ಸ್
ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ತಾಲೂಕುಗಳಲ್ಲಿ ಟಾಸ್ಕ್ಫೋರ್ಸ್ ರಚನೆ ಮಾಡಿ ರೋಗಿಗಳಿಗೆ ಹಳ್ಳಿಗಳಲ್ಲಿ ಸರಿಯಾದ ಕಾಳಜಿ ವಹಿಸಬೇಕು. ಈ ಟಾಸ್ಕ್ ಫೋರ್ಸ್‌ಗಳಲ್ಲಿ ಪಿಡಿಓ ಗಳನ್ನು ಕೂಡ ಬಳಸಬೇಕು. ಟೆಸ್ಟಿಂಗ್‌ಗಳನ್ನು ಕೇವಲ ಸಿಂಪ್ಟಮೆಟಿಕ್ ಇದ್ದವರಿಗೆ ಸೀಮಿತ ಮಾಡಿ ಮತ್ತು ಟೆಸ್ಟ್ ರಿಸಲ್ಟ್ 24 ಗಂಟೆಗಳಲ್ಲಿ ಕೊಡುವ ವ್ಯವಸ್ಥೆ ಆಗಬೇಕು. ಬ್ಯಾಕ್‌ಲಾಗ್ ಟೆಸ್ಟ್ ಸ್ಯಾಂಪಲ್ ಏನಿದೆಯೋ ಅದನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಸರಿಯಾದ ಸಮಯದಲ್ಲಿ ತಲುಪುವಂತೆ ಕ್ರಮ ವಹಿಸಬೇಕು, ಪ್ರತಿ ಆಸ್ಪತ್ರೆಯಲ್ಲಿ ರೆಮ್ಡಿಸಿವರ್ ಔಷಧ ಹಾಗೂ ಆಕ್ಷಿಜನ್ ಬಗ್ಗೆ ಆಡಿಟ್ ಆಗಬೇಕು. ಯಾರಿಗೆ ಅತೀ ಅವಶ್ಯವಿದೆಯೋ ಅವರಿಗೆ ಕೊಡುವ ವ್ಯವಸ್ಥೆ ಮಾಡಬೇಕು. ಸೋಂಕಿನ ಯಾವ ಹಂತದಲ್ಲಿ ರೆಮ್ಡಿಸಿವಿರ್ ಬಳಸಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನವಿದೆ. ಅನಗತ್ಯವಾಗಿ ರೆಮ್ಡಿಸಿವಿರ್ ಬಳಸುವ ಬಗ್ಗೆ ನಿಗಾವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ ಪರಿಹಾರ ನಿಧಿಗೆ ಸಚಿವರು, ಶಾಸಕರ ವೇತನ ದೇಣಿಗೆ ನೀಡಲು ನಿರ್ಧಾರ