ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಈ ಹಿಂದೆ ಸಂಕಷ್ಟಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೆ ಭೂ ಸಂಕಷ್ಟ ಎದುರಾಗಿದೆ.
ನಗರದ ಬೆಳ್ಳಂದೂರು ಹಾಗೂ ದೇವರ ಬೀಸನಹಳ್ಳಿಯಲ್ಲಿ ಐಟಿ ಕಾರಿಡಾರ್ಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶಪಡಿಸಿಕೊಂಡಿದ್ದ ಜಮೀನನ್ನು, ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪವಿತ್ತು. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು 2015ರಲ್ಲಿ ದಾಖಲಿಸಿದ್ದ ಎಫ್ಐಆರ್ ಹಾಗೂ ಲೋಕಾಯುಕ್ತ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿ.ಎಸ್. ಯಡಿಯೂರಪ್ಪ 2019 ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ಏಕ ಸದಸ್ಯ ಪೀಠ ಇಂದು ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ ಲೋಕಾಯುಕ್ತ ಕೋರ್ಟ್ 2015ರ ಫೆಬ್ರವರಿ 8 ರಂದು ಪ್ರಕರಣದ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರೂ, ಈವರೆಗೆ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸದ ಲೋಕಾಯುಕ್ತ ಪೊಲೀಸರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೆಯೇ ಪೊಲೀಸರ ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಲೋಕಾಯುಕ್ತ ಕೋರ್ಟಿಗೆ ನಿರ್ದೇಶಿಸಿದೆ.
ಪೀಠ ತನ್ನ ಆದೇಶದಲ್ಲಿ, ಲೋಕಾಯುಕ್ತ ನ್ಯಾಯಾಲಯ 2015 ರಲ್ಲಿ ಪ್ರಕರಣದ ತನಿಖೆಗೆ ಆದೇಶಿಸಿದೆ. 2019ರ ಜನವರಿ 25 ರಂದು ಯಡಿಯೂರಪ್ಪ ಅವರು ಪ್ರಕರಣ ರದ್ದು, ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಪ್ರಿಲ್ 2 ರಂದು ತಡೆಯಾಜ್ಞೆ ನೀಡಿದೆ. ಆದರೆ, 2015 ರಿಂದ 2019ರ ನಡುವಿನ ಅವಧಿಯಲ್ಲಿ ತನಿಖೆ ನಡೆಸಲು ಪೊಲೀಸರಿಗೆ ಯಾವುದೇ ತಡೆಯಾಜ್ಞೆ ಇರಲಿಲ್ಲ.
ಹಾಗಿದ್ದೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸದೆ ಇರುವ ಕ್ರಮ ಒಪ್ಪುವಂತಹದ್ದಲ್ಲ. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧದ ಪ್ರಕರಣಗಳನ್ನು ಸರಿಯಾಗಿ ತನಿಖೆ ನಡೆಸದಿದ್ದರೆ ಸಾರ್ವಜನಿಕರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ವಿಶ್ವಾಸ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
ರಾಜ್ಯ ಸರ್ಕಾರ 2000-01ನೇ ಸಾಲಿನಲ್ಲಿ ನಗರದ ವೈಟ್ ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿನ 500 ಎಕರೆ ಪ್ರದೇಶವನ್ನು ಐಟಿ ಕಾರಿಡಾರ್ ಎಂದು ಘೋಷಿಸಿತ್ತು. ಅದರಂತೆ ಮಾರತಹಳ್ಳಿ, ಬೆಳ್ಳಂದೂರು, ಕಾಡು ಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ, ಸರ್ಜಾಪುರ ಹಾಗೂ ದೇವರಬೀಸನಹಳ್ಳಿ ಸುತ್ತಮುತ್ತಲಿನ 434 ಎಕರೆ ಪ್ರದೇಶವನ್ನು ಪಡೆಯಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು.
ಈ ನಡುವೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಂಡಳಿ ವಶಪಡಿಸಿಕೊಂಡಿದ್ದ ದೇವರ ಬೀಸನಹಳ್ಳಿಯ ಸರ್ವೆ ನಂಬರ್ 49ರ 4.30 ಎಕರೆ, ಬೆಳ್ಳಂದೂರು ಗ್ರಾಮದ ಸರ್ವೆ ನಂಬರ್ 46/1ರ 1.17 ಎಕರೆ, ಸರ್ವೆ ನಂಬರ್ 18ರ 1.10 ಎಕರೆ, ಸರ್ವೆ ನಂಬರ್ 10ರ 33 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಲು ಡಿಸಿಎಂ ಬಿಎಸ್ವೈ ಕಾನೂನು ಬಾಹಿರವಾಗಿ ಆದೇಶಿಸಿದ್ದಾರೆ ಎಂದು ಆರೋಪಿಸಿ ವಾಸುದೇವರೆಡ್ಡಿ 2013ರ ಜುಲೈ 10 ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆರೋಪಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ 2018ರ ಫೆಬ್ರವರಿಯಲ್ಲಿ ಆದೇಶಿಸಿತ್ತು. ಅದರಂತೆ ಪೊಲೀಸರು 2015ರ ಫೆಬ್ರವರಿ 21 ರಂದು ಎಫ್ಐಆರ್ ದಾಖಲಿಸಿ ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯಾಗಿಸಿದ್ದರು.
ನಾಲ್ಕು ವರ್ಷಗಳ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ ಬಿಎಸ್ವೈ ತಮ್ಮ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಪೊಲೀಸರು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಹಾಗೆಯೇ ದೂರುದಾರರು ಮೊದಲು ಪೊಲೀಸರಿಗೆ ದೂರು ನೀಡಿ ಅವರು ನಿರಾಕರಿಸಿದ್ದರೆ ಮಾತ್ರ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಬಹುದಿತ್ತು. ಆದರೆ, ದೂರುದಾರರು ನೇರವಾಗಿ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು. ಈ ತಾಂತ್ರಿಕ ಕಾರಣಗಳ ಆಧಾರದಲ್ಲಿ 2019ರ ಏಪ್ರಿಲ್ 2 ರಂದು ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಇನ್ನು ಇದೇ ಪ್ರಕರಣದಲ್ಲಿ ಐಟಿ ಕಾರಿಡಾರ್ಗಾಗಿ ನೋಟಿಫೈ ಮಾಡಿದ್ದ ಬೆಳ್ಳಂದೂರು ಅಮಾನಿಕೆರೆಯ 6.14 ಎಕರೆಯನ್ನು ಅಂದಿನ ಕೈಗಾರಿಕಾ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ತಮ್ಮ ಪ್ರಭಾವ ಬಳಸಿ ಡಿನೋಟಿಫೈ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಅದರಂತೆ ಎಫ್ಐಆರ್ ನಲ್ಲಿ ದೇಶಪಾಂಡೆ ಮೊದಲ ಆರೋಪಿಯಾಗಿದ್ದರೆ, ಬಿಎಸ್ವೈ ಎರಡನೇ ಆರೋಪಿಯಾಗಿದ್ದಾರೆ. ಆದರೆ, ದೇಶಪಾಂಡೆ ಕೆರೆ ಜಾಗ ಕೈಬಿಟ್ಟ ಕ್ರಮ ಸಮರ್ಥಿಸಿಕೊಂಡ ಹಿನ್ನೆಲೆ, ಹೈಕೋರ್ಟ್ ಅವರ ವಿರುದ್ಧದ ಪ್ರಕರಣವನ್ನು 2017 ರಲ್ಲಿ ರದ್ದುಪಡಿಸಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು.