ಬೆಂಗಳೂರು: ಶೌರ್ಯ ಪ್ರಶಸ್ತಿ ಪುರಸ್ಕೃತ ರಾಜ್ಯದ ವೀರ ಯೋಧರಿಗೆ ನೀಡಲಾಗುತ್ತಿರುವ ಗೌರವ ಧನವನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ 'ಭಾರತ ಹಾಗೂ ಪಾಕಿಸ್ತಾನ ನಡುವಿನ 1971ರ ಯುದ್ಧದ ವಿಜಯೋತ್ಸವ' ಸಮಾರಂಭದಲ್ಲಿ ಮಾತನಾಡಿದ ಅವರು, ಪರಮವೀರ ಚಕ್ರ, ಅಶೋಕ ಚಕ್ರ ಪುರಸ್ಕೃತ ಯೋಧರಿಗೆ ನೀಡುವ ಗೌರವಧನವನ್ನು 25 ಲಕ್ಷದಿಂದ 1 ಕೋಟಿಗೆ ಹೆಚ್ಚಳ ಮಾಡಲಾಗುವುದು. ಮಹಾವೀರ ಚಕ್ರ ಪುರಸ್ಕೃತ ಯೋಧರಿಗೆ ನೀಡಲಾಗುವ ಗೌರವಧನವನ್ನು 12 ಲಕ್ಷ ರಿಂದ 50 ಲಕ್ಷ ರೂ, ವೀರಚಕ್ರ ಪುರಸ್ಕೃತರಿಗೆ 8 ರಿಂದ 25 ಲಕ್ಷ, ಶೌರ್ಯ ಚಕ್ರ ಪುರಸ್ಕೃತರಿಗೆ 8 ರಿಂದ 25 ಲಕ್ಷ ರೂ. ಹಾಗೂ ಕೀರ್ತಿ ಚಕ್ರ ಪುರಸ್ಕೃತರಿಗೆ ನೀಡುವ ಗೌರವಧನವನ್ನು 12ಲಕ್ಷ ದಿಂದ 50 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತದೆ ಎಂದು ಘೋಷಿಸಿದರು.
1971 ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದಿದ್ದ ಯುದ್ಧದಲ್ಲಿ ಭಾರತದ ಭೂಸೇನೆ, ವಾಯುಸೇನೆ, ನೌಕಸೇನೆಯ ಯೋಧರು ಅಪ್ರತಿಮ ಶೌರ್ಯ ಪ್ರದರ್ಶನ ಮೆರೆದಿದ್ದರು. 13 ದಿನಗಳ ಕಾಲ ನಡೆದಿದ್ದ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಗಳಿಸಿತ್ತು. ಇದರ 50ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದೆ ಎಂದ ಅವರು, ಹುತಾತ್ಮ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವುದು ಹೆಮ್ಮೆಯ ಸಂಗತಿ ಹಾಗೂ ಕರ್ತವ್ಯ ಕೂಡ. ಸೇನಾನಿಗಳನ್ನು ಸ್ಮರಿಸಲು, ಗೌರವಿಸಲು ಸ್ಫೂರ್ತಿ ಆಗಲಿ ಎಂದರು.
ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಗೌರವ: ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತ ವೀರ ಯೋಧರಿಗೆ ಸಿಎಂ ಯಡಿಯೂರಪ್ಪ ಗೌರವ ಸಲ್ಲಿಸಿದರು.
ಓದಿ: ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ: ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯ
ಮಹಾವೀರಚಕ್ರ ಪುರಸ್ಕೃತ ಲೆ. ಕರ್ನಲ್ ಪತ್ನಿ, ಮಹಾವೀರ ಚಕ್ರ ಪುರಸ್ಕೃತ ಲೆಪ್ಟಿನೆಂಟ್ ಕಮಾಂಡರ್ ಸಂತೋಷ್ ಕುಮಾರ್ ಗುಪ್ತಾ, ವೀರ್ ಚಕ್ರ ಪುರಸ್ಕೃತರಾದ ಮೇಜರ್ ಜನರಲ್ ಕೆ.ಪಿ ನಂಜಪ್ಪ, ಬ್ರಿಗೇಡಿಯರ್ ಪಿ.ವಿ ಸಹದೇವನ್, ರಿಷಿರಾಜ್ ಸೂದ್, ಪುರಸ್ಕೃತ ಕಮಾಂಡರ್ ಎ ಎಸ್ ಪನ್ವರ್, ವಿಂಗ್ ಕಮಾಂಡರ್ ಅಸ್ಪಾರಿ ರಘನಾಥನ್ ಗೆ ಸಿಎಂ ಗೌರವ ಸಲ್ಲಿಸಿದರು.