ಬೆಂಗಳೂರು: ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಖುದ್ದಾಗಿ ಕೋವಿಡ್ ನಿಯಂತ್ರಣ ಕುರಿತು ಪ್ರಗತಿ ಪರಿಶೀಲನೆ ನಡೆಸಲು ನಿರ್ಧರಿಸಿರಯವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗಾವಿ, ಧಾರವಾಡ ಜಿಲ್ಲಾ ಪ್ರವಾಸಕ್ಕೆ ತೆರಳಿದ್ದಾರೆ.
ಕೋವಿಡ್ ಕಾರಣಕ್ಕೆ ಪ್ರವಾಸ ರದ್ದುಗೊಳಿಸಿ ಗೃಹ ಕಚೇರಿ ಮತ್ತು ನಿವಾಸದಿಂದಲೇ ವಿಡಿಯೋ ಸಂವಾದದ ಮೂಲಕ ಸಭೆ ನಡೆಸುತ್ತಿದ್ದ ಸಿಎಂ ಇದೀಗ ಜಿಲ್ಲೆಗಳತ್ತಾ ಪ್ರವಾಸ ಆರಂಭಿಸಿದ್ದಾರೆ. ಲಾಕ್ ಡೌನ್ ನಂತರ ತುಮಕೂರಿಗೆ ಮೊದಲ ಪ್ರವಾಸ ಕೈಗೊಂಡಿದ್ದ ಸಿಎಂ ಎರಡನೇ ಪ್ರವಾಸ ಉತ್ತರ ಕರ್ನಾಟಕಕ್ಕೆ ಕೈಗೊಂಡಿದ್ದಾರೆ.
ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಲಿರುವ ಸಿಎಂ 10.40 ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದ್ದಾರೆ. 11 ಗಂಟೆಗೆ ಸುವರ್ಣ ವಿಧಾನಸೌಧಲ್ಲಿ ಬೆಳಗಾವಿ ಜಿಲ್ಲಾ ಕೋವಿಡ್-19 ನಿಯಂತ್ರಣ ಹಾಗು ಇತರ ಅಭಿವೃದ್ಧಿ ವಿಷಯಗಳ ಕುರಿತು ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 1.30 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಿ 2 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸವಾಯ್ ಗಂಧರ್ವ ಕಲಾಮಂದಿರದಲ್ಲಿ ಧಾರವಾಡ ಜಿಲ್ಲಾ ಕೋವಿಡ್ ನಿಯಂತ್ರಣ ಹಾಗು ಇತರ ಅಭಿವೃದ್ಧಿ ವಿಷಯಗಳ ಕುರಿತು ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಡಲಿರುವ ಸಿಎಂ 7 ಗಂಟೆಗೆ ಹೆಚ್.ಎ.ಎಲ್ ನಿಲ್ದಾಣಕ್ಕೆ ವಾಪಸ್ಸಾಗಲಿದ್ದಾರೆ.
ಈ ಕುರಿತು ಪ್ರವಾಸಕ್ಕೆ ತೆರಳುವ ಮುನ್ನ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸುಧಾಕರ್ ಜೊತೆಯಲ್ಲಿ ಬೆಳಗಾವಿ, ಧಾರವಾಡ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಅಲ್ಲಿನ ಕೋವಿಡ್ ನಿಯಂತ್ರಣ ಕುರಿತು ಪರಿಶೀಲನೆ ನಡೆಸಿ ಸಂಜೆ ವಾಪಸ್ಸಾಗುತ್ತೇನೆ ಎಂದರು. ಬೆಂಗಳೂರಿನಲ್ಲಿ ಮಳೆಹಾನಿ ಅನಾಹುತಗಳ ತಡೆಯುವಿಕೆ ಕುರಿತು ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಎಲ್ಲ ರೀತಿಯ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ, ಎಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದರು.