ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ಕ್ರಮ, ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಹಂತ 3, ಎತ್ತಿನಹೊಳೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ, ಕೊಪ್ಪಳ ಜಿಲ್ಲೆ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ನಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಬೇಡ್ತಿ-ವರದಾ ನದಿ ಜೋಡಣೆಯಡಿ ಒಟ್ಟು 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲು NWDAಗೆ ಮನವಿ ಮಾಡಲಾಗಿದೆ. ತಾಂತ್ರಿಕ ಸಾಧ್ಯಾ-ಸಾಧ್ಯತೆಗನುಗುಣವಾಗಿ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಬಜೆಟ್ ಮಂಡನೆಯಲ್ಲಿ ಸಿಎಂ ತಿಳಿಸಿದ್ದಾರೆ.
ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ ಯೋಜನೆಯಡಿ 1500 ಕೋಟಿ ರೂ. ಮೊತ್ತದಲ್ಲಿ ರಾಜ್ಯದ 58 ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಪ್ರಸ್ತಾವನೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಕಾರ್ಯನೀತಿ ಜಾರಿ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎ.ಎಲ್.ಡಿ ನೀರು ತುಂಬಿಸುವ 500 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಇದನ್ನೂ ಓದಿ: ಯಡಿಯೂರಪ್ಪ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿದ್ದೇನು?
ಪಶ್ಚಿಮ ವಾಹಿನಿ ಯೋಜನೆ ಕುರಿತ ಮಾಸ್ಟರ್ ಪ್ಲ್ಯಾನ್ನಡಿ, ಮುಂದಿನ 5 ವರ್ಷಗಳಲ್ಲಿ 3986 ಕೋಟಿ ರೂ. ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು ನಿರ್ಮಾಣ. 2021-22 ನೇ ಸಾಲಿನಲ್ಲಿ 500 ಕೋಟಿ ಅನುದಾನ ಘೋಷಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ 300 ಕೋಟಿ ವೆಚ್ಚದಲ್ಲಿ ನದಿ ಪ್ರವಾಹ ಮತ್ತು ಭಾರಿ ಅಲೆಗಳಿಂದ ಉಪ್ಪುನೀರು ಹಿಮ್ಮುಖವಾಗಿ ನುಗ್ಗುವುದನ್ನು FLAP GATE ಮುಖಾಂತರ ತಡೆಗಟ್ಟುವ ಖಾರ್ಲ್ಯಾಂಡ್ ಯೋಜನೆ ಜಾರಿಗೊಳಿಸಲಾಗುವುದು.