ಬೆಂಗಳೂರು: ಮೈಸೂರು ಹಸಿರು ಪ್ರತಿಷ್ಠಾನ ವತಿಯಿಂದ ಎರಡು ಸಾವಿರ ಗಿಡಗಳ ಹಂಚಿಕೆ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ನಗರದ ಬಿಜಿಎಸ್ ಕ್ಯಾಂಪಸ್ ನಲ್ಲಿ ಗಿಡ ನೆಟ್ಟು ಚಾಲನೆ ನೀಡಿದರು.
ಇದರ ಜತೆ ಬಿಜಿಎಸ್ ಮೆಡಿಕಲ್ ಕಾಲೇಜಿನಿಂದ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಮತ್ತು ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಭಾಗಿಯಾಗಿದ್ದರು. ಸಚಿವ ಎಸ್.ಟಿ ಸೋಮಶೇಖರ್ ಉಪಸ್ಥಿತರಿದ್ದರು.
ಸಿಎಂ ಬಿಎಸ್‌ವೈ ಮಾತನಾಡಿ, ಬಿಜಿಎಸ್ ಆಸ್ಪತ್ರೆ ವತಿಯಿಂದ ಆಕ್ಸಿಜನ್, ಐಸಿಯು, ಸಾಮಾನ್ಯ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಹಸಿರು ಪ್ರತಿಷ್ಠಾನದಿಂದ 2 ಸಾವಿರ ಗಿಡಗಳನ್ನ ನೆಡಲಾಗಿದೆ. ನಿರ್ಮಲಾನಂದ ಶ್ರೀಗಳು, ಪ್ರಕಾಶ್ ಸ್ವಾಮೀಜಿ ಅವರಿಗೆ ಧನ್ಯವಾದಗಳು. ಬಿಜಿಎಸ್ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿದ್ದು ಖುಷಿ ತಂದಿದೆ. ನಾಡಿನ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆ ಮಾಡಲಾಗಿದೆ. ಜಾತ್ಯಾತೀತವಾಗಿ ಶಿಕ್ಷಣ ಬಾಗಿಲು ತೆರೆದಿದೆ. ಉನ್ನತ ಶಿಕ್ಷಣ ಜೊತೆಗೆ ಆಧುನಿಕತೆಯನ್ನ ಹೊಂದಿದೆ. ಕಡು ಬಡವರಿಗೂ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಬಿಜಿಎಸ್ ಸಂಸ್ಥೆ ಸರ್ಕಾರದೊಂದಿಗೆ ಸಹಕಾರ ನೀಡಿದೆ ಎಂದರು.
ಕೋವಿಡ್ ಕೇರ್ ಆರಂಭಿಸಿರೋದು, ಸಂಸ್ಥೆಯ ಮಾನವೀಯತೆ ಕಂಡು ಬರ್ತಿದೆ. ನಿರ್ಮಲಾನಂದ ಶ್ರೀಗಳಿಗೆ ಗೌರವ ಅರ್ಪಿಸುತ್ತೇನೆ. ಕಳೆದ ಮೂರು ವರ್ಷದಿಂದ ಹಸಿರು ಪ್ರತಿಷ್ಠಾನ ಕೆಲಸ ಮಾಡ್ತಿದೆ. ಸಾಮೂಹಿಕವಾಗಿ ಗಿಡಗಳನ್ನ ನೆಡಲಾಗ್ತಿದೆ. ಮನು ಕುಲದ ಒಳಿತಿಗೆ ಉತ್ತಮ ಕೆಲಸ ಮಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ. ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಎಲ್ಲರಿಗೂ ಮಾದರಿಯಾಗಲಿ ಎಂದರು. ಲಾಕ್ ಡೌನ್ ವಿಸ್ತರಣೆ ವಿಚಾರ ಪ್ರಸ್ತಾಪಿಸಿದಾಗ, ಆ ವಿಚಾರ ಮತ್ತೊಮ್ಮೆ ಚರ್ಚೆ ಮಾಡೋಣವೆಂದರು.
ನಿರ್ಮಲಾನಂದ ಶ್ರೀಗಳು ಮಾತನಾಡಿ, ಬಿಜಿಎಸ್ ಮಠದಿಂದ ಹೊಸ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಒಂದು ವರ್ಷದಿಂದ ಕೊರೊನಾ ಕಾಣಿಸಿಕೊಂಡಿದೆ. ಕೋವಿಡ್ ರೋಗಿಗಳನ್ನ ಟ್ರೀಟ್ ಮಾಡುವ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಆಸ್ಪತ್ರೆಯ 75 ರಷ್ಟು ಬೆಡ್ ಮೀಸಲಿಟ್ಟಿದ್ದೇವೆ. ಎಲ್ಲೆಡೆ ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ 13 ಕೆಎಲ್ ಕೆಪಾಸಿಟಿ ಟ್ಯಾಂಕ್ ಉದ್ಘಾಟನೆ ಮಾಡಲಾಗಿದೆ. ಪ್ರಾರಂಭದಲ್ಲಿ ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿತ್ತು. ಈ ಸಮಯದಲ್ಲಿ ಕೆಲಸ ಮಾಡ್ತಿರೋ ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದರು.