ಬೆಂಗಳೂರು : ಬಿ ಎಸ್ ಯಡಿಯೂರಪ್ಪ ಅವರನ್ನು ಡಿಸೆಂಬರ್ ಅಂತ್ಯದ ವೇಳೆಗೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಹೈಕಮಾಂಡ್ ಸೂಚಿಸಿದೆ ಎಂಬ ಊಹಾಪೋಹ ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದ್ದವು. ಅದಕ್ಕೆ ಪೂರಕ ಎಂಬಂತೆ ಯಡಿಯೂರಪ್ಪ, ಕೆಲ ದಿಢೀರ್ ನಿರ್ಧಾರಗಳು ಕುತೂಹಲ ಮೂಡಿಸಿದ್ದವು.
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆ ಇಂದಿನ ಸಚಿವ ಸಂಪುಟ ಸಭೆ ಮಹತ್ವ ಪಡೆದಿತ್ತು. ನಿಗಮ-ಮಂಡಳಿಗಳಿಗೆ ನೇಮಕ, ಆರ್ಥಿಕ ಇಲಾಖೆಗೆ ಸೂಚನೆ, ಸಾಲು ಸಾಲು ನಿಗಮಗಳ ರಚನೆ ಮಾಡುವ ಮೂಲಕ ಸಿಎಂ, ಹೈಕಮಾಂಡ್‌ಗೇ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದ್ದರು.
ಆದರೆ, ಹೈಕಮಾಂಡ್ನಿಂದ ದೂರವಾಣಿ ಮೂಲಕ ಬಂದ ಸೂಚನೆಯೊಂದು ಯಡಿಯೂರಪ್ಪನವರನ್ನು ತಣ್ಣಗಾಗಿಸಿದೆ. ಈ ಸಂಬಂಧ ಯಡಿಯೂರಪ್ಪ ನಡೆಸಲು ಉದ್ದೇಶಿಸಲಾಗಿದ್ದ ಮಹತ್ವದ ತುರ್ತು ಸುದ್ದಿಗೋಷ್ಠಿ ರದ್ದು ಮಾಡಿದ್ದು, ಸಂಪುಟ ಸಭೆಯಲ್ಲಿಯೂ ಆ ಒಂದು ಮಹತ್ವದ ನಿರ್ಣಯ ಕೈಗೊಂಡಿಲ್ಲ.
ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಹೇಳಿಕೆ ನೀಡಿದ ಯಡಿಯೂರಪ್ಪ, ವೀರಶೈವ ಲಿಂಗಾಯಿತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದು ತಿಳಿಸಿದ್ದರು.
ಲಿಂಗಾಯಿತರನ್ನು ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಿದ್ದೆವು. ಆದರೆ, ದೆಹಲಿಗೆ ಹೋಗಿ ಚರ್ಚಿಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಯಾವುದೇ ಆತುರದ ತೀರ್ಮಾನ ಕೈಗೊಳ್ಳದಂತೆ ಸಂಪುಟ ಸಹೋದ್ಯೋಗಿಗಳು ಸಲಹೆ ಮಾಡಿದ್ದಾರೆ. ಹೀಗಾಗಿ, ದೆಹಲಿಗೆ ಹೋಗಿ ಬಂದ ನಂತರವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದರು.
ಸಿಎಂ ಯೂಟರ್ನ್ ಹೊಡೆದಿದ್ಯಾಕೆ?:
ವೀರಶೈವ-ಲಿಂಗಾಯತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಯಡಿಯೂರಪ್ಪ ನಿರ್ಧಾರ ಮಾಡಿದ್ದರು. ಅದರಂತೆ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡುವ ಕುರಿತು ಕ್ಯಾಬಿನೆಟ್ ಅಜೆಂಡಾದ 27ನೇ ವಿಷಯವಾಗಿ ಸೇರಿಸಲಾಗುತ್ತು.
ಆದರೆ, ಕೊನೆ ಕ್ಷಣಗಳಲ್ಲಿ ಮುಖ್ಯಮಂತ್ರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ, ಆ ವಿಷಯವನ್ನು ಸಂಪುಟದಲ್ಲಿ ಚರ್ಚೆ ಮಾಡದೇ ತಡೆಹಿಡಿಯಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ದೂರವಾಣಿ ಕರೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.